ಗೋಣಿಕೊಪ್ಪ ವರದಿ, ಫೆ. ೨೧: ಬೆಳೆಗಾರರರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಹೆಚ್ಚು ಆದಾಯ ಗಳಿಸಬಹುದು ಎಂದು ಗೋಣಿಕೊಪ್ಪ ಗ್ರಾ.ಪಂ ಅಧ್ಯಕ್ಷೆ ಚೈತ್ರ. ಬಿ ಚೇತನ್ ಹೇಳಿದರು.

ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಹಾಗೂ ಪೊನ್ನಂಪೇಟೆ ಪಶುಪಾಲನಾ ಇಲಾಖೆ ವತಿಯಿಂದ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ “ವೈಜ್ಞಾನಿಕ ಹೈನುಗಾರಿಕೆ ಮತ್ತು ಸಾಕಾಣೆ” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೆಳೆಗಾರರು ಕೃಷಿ ಚಟುವಟಿಕೆಗಳ ಜೊತೆಯಲ್ಲಿ ಹೈನುಗಾರಿಕೆಯಲ್ಲಿ ಹೆಚ್ಚಿನ ಗಮನಹರಿಸುವುದರಿಂದ ಹೆಚ್ಚು ಆದಾಯಗಳಿಸಬಹುದು ಎಂದು ಹೇಳಿದರು.

ಪೊನ್ನಂಪೇಟೆ ಪಶುವೈದ್ಯಾಧಿಕಾರಿ ಶಾಂತೇಶ್ ಮಾತನಾಡಿ, ಸಕಾಲದಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಇದರಿಂದ ರೋಗ ಬರದಂತೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಬಹುದು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಜನರು ಬಳಸಿಕೊಳ್ಳಬೇಕು ಇದರಿಂದ ಜನರು ಆರ್ಥಿಕವಾಗಿ ಸದೃಢವಾಗಲು ಸಹಕಾರಿಯಾಗಲಿದೆ ಎಂದು ಹೇಳಿದರು. ಕಾರ್ಯಾಗಾರದಲ್ಲಿ ೩೫ಕ್ಕೂ ಹೆಚ್ಚು ಬೆಳೆಗಾರರು ಭಾಗವಹಿಸಿದ್ದರು.

ಹಾಸನದ ಪಶುಸಂಗೋಪನಾ ತರಬೇತಿ ಕೇಂದ್ರದ ಉಪನಿರ್ದೇಶಕ ಎಸ್.ಎನ್. ನಾಗರಾಜ್, ಕೆವಿಕೆ ತಜ್ಞರಾದ ಪ್ರಭಾಕರ್, ಪಶುವೈದ್ಯಾರಾದ ಭವಿಷ್ಯಕುಮಾರ್, ಡಾ. ಸುರೇಶ್, ಡಾ. ಗಿರೀಶ್ ಇದ್ದರು.