*ಗೋಣಿಕೊಪ್ಪ, ಫೆ. ೨೧ : ಶಿಥಿಲಾವಸ್ಥೆಯ ನೆಪದಲ್ಲಿ ಕೆಡವಲಾದ ಬಸ್ ನಿಲ್ದಾಣದ ಕಟ್ಟಡವನ್ನು ಮತ್ತೆ ಕಟ್ಟಲಾಗದ ಸ್ಥಿತಿಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಬಳಲುತ್ತಿದ್ದರೆ, ತಾತ್ಕಾಲಿಕವಾಗಿ ನಿರ್ಮಿಸಿದ ಪ್ರಯಾಣಿಕರ ತಂಗುದಾಣ ಅವ್ಯವಸ್ಥೆಗಳ ಆಗರವಾಗಿದೆ.
ಹಲವು ದಶಕಗಳ ಹಿಂದೆ ನಿರ್ಮಿಸಿದ ಬಸ್ ನಿಲ್ದಾಣ ಶಿಥಿಲಗೊಂಡಿದ್ದ ರಿಂದ ಕೆಲವು ವರ್ಷಗಳ ಹಿಂದೆ ಕೆಡವಲಾಗಿತ್ತು. ಕೆಡವಿದ ಆ ಕ್ಷಣದ ಆಸಕ್ತಿಯಲ್ಲಿಯೇ ಮತ್ತೆ ಬಸ್ ನಿಲ್ದಾಣ ಕಟ್ಟಡ ನಿರ್ಮಿಸುವಲ್ಲಿ ಅಂದಿನ ಪಂಚಾಯಿತಿ ಆಡಳಿತಕ್ಕೆ ಸಾಧ್ಯವಾಗಲಿಲ್ಲ. ನೂತನ ಬಸ್ ನಿಲ್ದಾಣ ನಿರ್ಮಿಸುವಲ್ಲಿ ಸ್ಥಳೀಯ ಪಂಚಾಯಿತಿ ಪ್ರತಿನಿಧಿಗಳ ಆಸಕ್ತಿ ಕೊರತೆ ಹಿನ್ನೆಲೆಯಲ್ಲಿ ಇಂದಿಗೂ ಬಸ್ ನಿಲ್ದಾಣ ನಿರ್ಮಿಸುವ ಕಾರ್ಯಕ್ಕೆ ಚಾಲನೆ ದೊರೆತಿಲ್ಲ.
ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಿರುವ ಸಣ್ಣ ಕುಟೀರದಂತಿರುವ ವಿಶ್ರಾಂತಿ ತಂಗುದಾಣ ಮಳೆ-ಗಾಳಿಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದೆ. ಇದು ಸೋಮಾರಿಗಳ, ಭಿಕ್ಷುಕರ, ಪುಂಡರ, ಧೂಮಪಾನಿಗಳು ಮತ್ತು ಮದ್ಯಪಾನಿಗಳ ಆಶ್ರಯ ತಾಣವಾಗಿ ಮಾರ್ಪಾಡಾಗಿದ್ದು, ಕೊಳಕು ಪ್ರದೇಶವಾಗಿ ರೋಗ, ರುಜಿನಗಳು ಹರಡುವ ಅಶಾಂತಿಯ ತಾಣವಾಗಿದೆ. ಮದ್ಯಪಾನಿಗಳ ವಿಶ್ರಾಂತಿ ಗೃಹವಾಗಿ ಮಾರ್ಪಟ್ಟಿದಲ್ಲದೇ ಮದ್ಯಪಾನಿಗಳ ಕೆಲವು ವರ್ತನೆಗಳಿಂದ ಮಹಿಳೆಯರಿಗೆ ಮುಜುಗರ ಉಂಟಾಗುವ ಪ್ರಸಂಗವು ಯಥೇಚ್ಚವಾಗಿ ನಡೆಯುತ್ತಿದೆ. ಈ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕಾಗಿದೆ ಎಂಬದು ಜನರ ಒತ್ತಾಯವಾಗಿದೆ.
ತಾಲೂಕಿನ ವಾಣಿಜ್ಯ ಪಟ್ಟಣವಾಗಿರುವ ಗೋಣಿಕೊಪ್ಪದಲ್ಲಿ ಉತ್ತಮ ಬಸ್ ನಿಲ್ದಾಣದ ಜತೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿಶ್ರಾಂತಿ ಗೃಹ ನಿರ್ಮಾಣವಾಗಬೇಕಾಗಿದೆ. ಕುಡಿಯುವ ನೀರು, ಶೌಚಾಲಯ ಇನ್ನಿತರ ಮೂಲ ಸೌಕರ್ಯಗಳ ಅವಶ್ಯಕತೆಗಳನ್ನು ಒದಗಿಸಿಕೊಡುವ ಕಾರ್ಯ ಬಸ್ ನಿಲ್ದಾಣ ನಿರ್ಮಾಣದಿಂದ ನಡೆಯಬೇಕಾಗಿದೆ.
ಪಟ್ಟಣದ ಚರಂಡಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಕೊAಡು ವಾತಾವರಣ ಕಲುಷಿತಗೊಂಡಿದೆ. ಬಹುತೇಕ ಚರಂಡಿಗಳಲ್ಲಿ ಸರಾಗವಾಗಿ ನೀರು ಹರಿದು ಹೋಗದೇ ಇರುವುದರಿಂದ ತ್ಯಾಜ್ಯಗಳು ನಿಂತು ದುರ್ವಾಸನೆ ಬೀರುತ್ತಿದೆ. ಸೊಳ್ಳೆ, ನೊಣಗಳ ವಾಸಸ್ಥಾನವಾಗಿ ರೋಗ ಹರಡುವ ಭೀತಿ ಎದುರಾಗಿದೆ.
ಪ್ರತಿಬಾರಿಯೂ ಪಂಚಾಯಿತಿಗೆ ನೂತನ ಚುನಾಯಿತ ಸದಸ್ಯರು ಆಯ್ಕೆಯಾಗಿ ಬಂದಾಗ ಕಸ ಸಮಸ್ಯೆ ಬಗೆಹರಿಸುತ್ತೇವೆ. ಪಟ್ಟಣದ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತೇವೆ ಎಂಬ ಭರವಸೆಗಳನ್ನಷ್ಟೇ ನೀಡುತ್ತಾರೆ. ಆದರೆ, ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ೮ ವಾರ್ಡ್ಗಳು ಮತ್ತು ಪಟ್ಟಣದ ನಡುವೆ ಹಾದುಹೋಗುವ ಚರಂಡಿಗಳು ಶುಚಿತ್ವವನ್ನು ಕಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ÷್ಯವೇ ಪಟ್ಟಣದಲ್ಲಿ ಅಶುಚಿತ್ವ ಕಾಡಲು ಮುಖ್ಯ ಕಾರಣ ಎಂದು ಸ್ಥಳೀಯರ ಆರೋಪವಾಗಿದೆ. ಅಲ್ಲಲ್ಲಿ ತ್ಯಾಜ್ಯಗಳಿಂದ ತುಂಬಿಕೊAಡ ಚರಂಡಿಗಳನ್ನು ಕೂಡಲೇ ಶುದ್ಧಗೊಳಿಸುವ ಕಾರ್ಯಕ್ಕೆ ಪಂಚಾಯಿತಿ ಮುಂದಾಗಬೇಕೆAಬುದು ಗ್ರಾಮಸ್ಥರ ಒತ್ತಾಯಿಸಿದ್ದಾರೆ. -ಎನ್.ಎನ್. ದಿನೇಶ್