*ಗೋಣಿಕೊಪ್ಪ, ಫೆ. ೨೧: ದೇವರಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಬ್ಬಾಲೆ ಭದ್ರಗೊಳ ಗ್ರಾಮದಲ್ಲಿ ಗಬ್ಬದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಬಲಿ ಪಡೆದುಕೊಂಡಿದೆ.

ಭದ್ರಗೊಳ ಗ್ರಾಮದ ಮನೆಯಪಂಡ ಮೊಣ್ಣಪ್ಪ ಎಂಬುವವರಿಗೆ ಸೇರಿದ ರೂ. ೭೦ ಸಾವಿರ ಮೌಲ್ಯದ ದೇಸಿ ಹಸುವನ್ನು ಹುಲಿ ದಾಳಿ ನಡೆಸಿದೆ.

ಭಾನುವಾರ ಸಂಜೆ ಮೊಣ್ಣಪ್ಪ ಅವರ ಭತ್ತದ ಗದ್ದೆಯಲ್ಲಿ ಹಸುವನ್ನು ಮೇಯಿಸಲು ಬಿಡಲಾಗಿತ್ತು. ಹಸುವನ್ನು ಕೊಟ್ಟಿಗೆಗೆ ಕರೆತರಲು ಮೊಣ್ಣಪ್ಪ ಅವರ ಪತ್ನಿ ತೆರಳಿದಾಗ ಹಸು ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೋಚರಿಸಿದೆ. ನಡೆದ ಘಟನೆಯನ್ನು ಪತಿ ಮೊಣ್ಣಪ್ಪ ಅವರಿಗೆ ತಿಳಿಸಿದ ಸಂದರ್ಭ ಅರಣ್ಯಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಹಸು ಹುಲಿ ದಾಳಿಗೆ ಬಲಿಯಾಗಿರುವುದರ ಬಗ್ಗೆ ತಿಳಿಸಿದ್ದಾರೆ.

ಸ್ಥಳಕ್ಕೆ ತಕ್ಷಣವೇ ಭೇಟಿ ನೀಡಿದ ಅರಣ್ಯ ಸಿಬ್ಬಂದಿಗಳು ಗದ್ದೆಯಲ್ಲಿ ಹಸು ಸತ್ತುಬಿದ್ದಿರುವುದು ಗೋಚರಿಸಿದೆ. ಅದೇ ಕ್ಷಣದಲ್ಲಿ ಹಸುವಿನ ಕಳೇಬರ ಸಮೀಪದಲ್ಲೇ ಹುಲಿ ಅರಣ್ಯ ಇಲಾಖೆ ಕಣ್ಣಿಗೆ ಬಿದ್ದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಹುಲಿ ಬೋನ್ ಅಳವಡಿಸುವ ಮೂಲಕ ಸೆರೆ ಹಿಡಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಇತ್ತೀಚಿನ ಕೆಲ ತಿಂಗಳುಗಳಿAದ ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿ ಹೆಚ್ಚಾಗಿದೆ. ಅರಣ್ಯಾಧಿಕಾರಿಗಳು ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಲು ಮುಂದಾಗಿ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಿತಿಮತಿ ವಲಯ ಅರಣ್ಯಾಧಿಕಾರಿ ಆಶೋಕ್ ಹನುಗುಂದ ಹಾಗೂ ಸಿಬ್ಬಂದಿಗಳು ಹುಲಿ ಸೆರೆ ಹಿಡಿಯಲು ಸ್ಥಳದಲ್ಲೇ ಬೋನ್ ಅಳವಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

-ಎನ್.ಎನ್. ದಿನೇಶ್