ಕಣಿವೆ, ಫೆ. ೨೧: ಬೇಸಗೆಯ ದಿನಗಳು ಸನ್ನಿಹಿತವಾಗುತ್ತಿವೆ. ಅರಣ್ಯದಲ್ಲಿ ವನ್ಯ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸದಂತೆ ನೋಡಿಕೊಳ್ಳಬೇಕಾದದ್ದು ಇಲಾಖೆಯ ಆದ್ಯ ಕರ್ತವ್ಯವಾಗಬೇಕಿದೆ.
ಏಕೆಂದರೆ ಅರಣ್ಯಗಳ ಒಳಗೆ ಇರುವ ಕೆರೆಗಳನ್ನು ನಿರ್ವಹಣೆ ಮಾಡದೇ ನಿರ್ಲಕ್ಷ್ಯ ಮಾಡಿದ ಪರಿಣಾಮ ಬಹುತೇಕ ಕೆರೆಗಳಲ್ಲಿ ಹೂಳು ತುಂಬಿದ್ದು ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಹರಿದು ಬರುವ ನೀರು ಕೆರೆಗಳಲ್ಲಿ ನಿಲ್ಲದಂತಹ ದುಸ್ಥಿತಿಯನ್ನು ಕಾಣಬಹುದು. ಆದ್ದರಿಂದಲೇ ವನ್ಯಮೃಗಗಳು ಕುಡಿಯುವ ನೀರಿಗೆ ಪರಿತಪಿಸಿ ಅರಣ್ಯವನ್ನು ದಾಟಿ ನಾಡಿನತ್ತ ಧಾವಿಸುತ್ತಿವೆ.
ಕುಶಾಲನಗರ ಅರಣ್ಯ ವಿಭಾಗದಲ್ಲಿ ವಿವಿಧೆಡೆಗಳಲ್ಲಿ ೨೨ ಕೆರೆಗಳಿದ್ದು ಎಲ್ಲವು ಹೂಳು ತುಂಬಿವೆ. ಈ ಪೈಕಿ ಕೆಲವೊಂದು ಕೆರೆಗಳಲ್ಲಿ ಹೂಳು ತೆಗೆವ ಹೆಸರಲ್ಲಿ ಲಕ್ಷಾಂತರ ರೂಪಾಯಿ ಪೋಲು ಮಾಡಿರುವ ಆರೋಪವೂ ಕೇಳಿ ಬರುತ್ತಿದೆ.
ಕಾಡಾನೆಗಳಿಗೆ ಕಾಡಿನಲ್ಲಿ ಕುಡಿಯುವ ನೀರು ಮತ್ತು ಆಹಾರ ಇಲ್ಲದ್ದರಿಂದ ನಾಡಿನತ್ತ ಹೆಚ್ಚಾಗಿ ಧಾವಿಸಿ ಬರುವ ಕಾಡಾನೆಗಳಿಂದ ಕೃಷಿಕರಿಗೆ ಸಹಜವಾಗಿಯೇ ಬೆಳೆ ನಷ್ಟ ಆಗುತ್ತಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟದಿಂದ ಬೇಸತ್ತ ಕೆಲವು ಕೃಷಿಕರು ಕಾಡಾನೆಗಳ ಜೀವಕ್ಕೆ ಕುತ್ತು ತರುವಂತಹ ಕುತಂತ್ರಗಳನ್ನು ಹೆಣೆಯುತ್ತಿದ್ದಾರೆ.
ಆರು ತಿಂಗಳಲ್ಲಿ ಮೂರು ಕಾಡಾನೆ ಬಲಿ
ಕಳೆದ ಆರು ತಿಂಗಳ ಅವಧಿಯಲ್ಲಿ ಕುಶಾಲನಗರ ವ್ಯಾಪ್ಯಿಯಲ್ಲಿ ಮೂರು ಕಾಡಾನೆಗಳು ದುರುಳರ ಉರುಳಿಗೆ ಕೊರಳೊಡ್ಡಿ ಬಲಿಯಾಗಿವೆ. ಅಂದರೆ ಸೋಲಾರ್ ಬೇಲಿಯಲ್ಲಿ ವಿದ್ಯುತ್ ಹರಿಸಿ ಕಾಡಾನೆಗಳನ್ನು ಸಾಯಿಸುವುದು. ಗುಂಡು ಹೊಡೆದು ಘಾಸಿಗೊಳಿಸಿ ಜೀವ ತೆಗೆಯುವುದು ಸೇರಿದಂತೆ ಇನ್ನಿತರೆ ದುಷ್ಕೃತ್ಯಗಳಿಂದ ಕಾಡಾನೆಗಳು ಸಾವನ್ನಪ್ಪುತ್ತಿರುವುದು ಇತ್ತೀಚಿನ ವರ್ಷಗಳಲ್ಲಿ ಸರಾಗವಾಗಿ ಘಟಿಸುತ್ತಲೇ ಇದೆ. ಉದಾಹರಣೆಗೆ ಆನೆಕಾಡು ಬಳಿಯ ಬಸವನಹಳ್ಳಿಯಲ್ಲಿ ಆಹಾರ ಅರಸಿ ಗ್ರಾಮಕ್ಕೆ ಬಂದು ಕಾಡಿಗೆ ಮರಳುತ್ತಿದ್ದ ದೈತ್ಯ ಸಲಗವೊಂದಕ್ಕೆ ವಿದ್ಯುತ್ ಹರಿಸಿ ಸಾಯಿಸಲಾಗಿತ್ತು. ಹಾಗೆಯೇ ನಾಲ್ಕು ತಿಂಗಳ ಹಿಂದೆ ತೆಪ್ಪದ ಕಂಡಿ ಆಸುಪಾಸಿನ ಕಾವೇರಿ ನದಿ ದಂಡೆಯ ಮರೂರಿನಲ್ಲಿಯೂ ಕೂಡ ಅಲ್ಲಿನ ಬೆಳೆಗಾರರೊಬ್ಬರು ಸೋಲಾರ್ ತಂತಿಗೆ ವಿದ್ಯುತ್ ಹರಿಬಿಟ್ಟು ಕಾಡಾನೆಯೊಂದನ್ನು ಕೊಂದಿದ್ದರು.
ಇದೀಗ ನಂಜರಾಯಪಟ್ಟಣದ ದಾಸವಾಳದಲ್ಲಿ ಮೃತಪಟ್ಟ ಆರು ವರ್ಷ ಪ್ರಾಯದ ಮರಿಯಾನೆ ಸಾವಿಗೂ ಇಂತಹುದೇ ಕಾರಣವಿರಬಹುದಾದ ಶಂಕೆ ಇದೆ. ಹಾಗಾಗಿ ಕಾಡಾನೆಗಳ ಜೀವಹಾನಿ ತಪ್ಪಿಸಲು ಅರಣ್ಯಗಳಲ್ಲಿ ಇರುವ ಕೆರೆಗಳ ಸಂರಕ್ಷಣೆ ಹಾಗೂ ನೀರು ಶೇಖರಣೆ ಕಾರ್ಯ ಅತೀ ತುರ್ತು ಅನಿವಾರ್ಯವಾಗಿದೆ. ಕುಶಾಲನಗರ ಅರಣ್ಯ ವಲಯದಲ್ಲಿ ೨೨ ಕೆರೆಗಳಿವೆ!
ಕುಶಾಲನಗರ ಅರಣ್ಯ ವಿಭಾಗದಲ್ಲಿ ಕಾಡಾನೆಗಳು ಸೇರಿದಂತೆ ವನ್ಯಮೃಗಗಳ ದಾಹ ತೀರಿಸಲು ವಿವಿಧೆಡೆಗಳಲ್ಲಿ ೨೨ ಕೆರೆಗಳಿವೆ. ಆನೆಕಾಡು ಅರಣ್ಯದ ವ್ಯಾಪ್ತಿಯಲ್ಲಿ ೬ ಕೆರೆಗಳಿವೆ. ಅಂದರೆ ಆನೆಕಾಡು ಕೆರೆಮೂಲೆ ದೆವ್ವದ ಕೆರೆ, ಚುಂಡೇಕೆರೆ, ಆನೆಕಾಡು ವಸತಿ ಗೃಹ ಮುಂಬದಿಯ ಸಣ್ಣ ಕೆರೆ, ದಾಸವಾಳದ ಕೆರೆ, ಬಿದಿರಳ್ಳ ಕೆರೆ, ತೊಂಡೂರು ಕೆರೆ, ಏಳನೇ ಹೊಸಕೋಟೆ ಭಾಗದಲ್ಲಿ ಮಾವಿನಳ್ಳ ಕೆರೆ, ತಟ್ಟೆಕೆರೆ, ದುಬಾರೆ ವ್ಯಾಪ್ತಿಯ ಅಮ್ಮಾಳೆ ಕೆರೆ, ಆನೆಸತ್ತ ಕೆರೆ, ಕಂಡೆಕೆರೆ, ಕೋಣನಕಟ್ಟೆ ಕೆರೆ, ಬಾಚಿ ಕೆರೆ, ಕುಂಡೇ ಕೆರೆ, ಅತ್ತೂರು ಕೆರೆ, ಕಲ್ಲೂರು ಕೆರೆ, ಚೈನ್ ಗೇಟ್ ಕೆರೆ, ಅರಳಿಮರದ ಪಕ್ಕದ ಕೆರೆ, ಮಾಲ್ದಾರೆ ವಿಭಾಗದ ಕುಟ್ಡನಹಳ್ಳ ಕೆರೆ, ಪಟ್ಲಮಂಟಿಕೆರೆ, ನಂಜರಾಯಪಟ್ಟಣ ಚಿನ್ನೂರು ಕೆರೆ ಹೀಗೆ ಒಟ್ಟು ೨೨ ಕೆರೆಗಳಿವೆ.
ಕುಡಿಯುವ ನೀರಿದೆ - ಆಹಾರವೇ ಇಲ್ಲ
ಕಳೆದ ಬಾರಿ ಜಿಲ್ಲೆಯಲ್ಲಿ ಅತ್ಯುತ್ತಮವಾದ ಹಿಂಗಾರು ಮಳೆ ಸುರಿದದ್ದರಿಂದ ಅರಣ್ಯದಲ್ಲಿನ ಬಹುತೇಕ ಕೆರೆಗಳಲ್ಲಿ ನೀರು ತುಂಬಿದ್ದು ಕಾಡಾನೆಗಳಿಗೆ ಕುಡಿಯುವ ನೀರಿಗೇನು ಬರವಿಲ್ಲ.
ಆಹಾರಕ್ಕಾಗಿ ಹಾಹಾಕಾರ
ಪ್ರೌಢ ವಯಸ್ಸಿನ ಆನೆಗಳು ಪ್ರತಿದಿನ ೧೦೦ ರಿಂದ ೧೫೦ ಕೆ.ಜಿ. ಮೇವು ತಿಂದು ೧೫೦ ಲೀಟರ್ ನಷ್ಟು ನೀರು ಕುಡಿಯುತ್ತವೆ. ವರುಣನ ಕೃಪೆಯಿಂದಾಗಿ ಹೂಳು ತುಂಬಿರುವ ಅರ್ಧಂಬರ್ಧ ಕೆರೆಗಳಲ್ಲಿ ನೀರೇನೋ ಇದೆ. ಆದರೆ ಕಾಡಾನೆಗಳು ಹೊಟ್ಟೆ ತುಂಬಿಸಿಕೊಳ್ಳಲು ಬೇಕಾದ ಆಹಾರದ ಸೊಪ್ಪು ಹಾಗೂ ತೊಗಟೆ ಇರುವ ಮರಗಳೇ ಇಲ್ಲ. ಅಂದರೆ ಆನೆಗಳಿಗೆ ಬಿದಿರು ಸೊಪ್ಪು, ಆಲದ ಮರ, ಬಸರಿ ಮರ, ಕಿಚಿಯಾ ಮರಗಳ ಎಲೆಗಳು ಬಲು ಇಷ್ಟ. ಆದರೆ ಈ ಜಾತಿಯ ಮರಗಳು ಇಂದು ಅರಣ್ಯಗಳಲ್ಲಿ ಇಲ್ಲವೇ ಇಲ್ಲ. ಹಾಗಾಗಿ ಅರಣ್ಯ ಇಲಾಖೆ ಕಾಟಾಚಾರದ ಗಿಡಗಳನ್ನು ಬೆಳೆಸುವ ನಾಟಕ ಕೈಬಿಟ್ಟು ಪ್ರತೀ ವರ್ಷ ಕಾಡಾನೆಗಳಿಗೆ ಬೇಕಾದ ಆಹಾರದ ಗಿಡ ಮರಗಳನ್ನು ನಿಗದಿತ ಅರಣ್ಯ ಪ್ರದೇಶಗಳಲ್ಲಿ ಬೆಳೆಸುವ ಯೋಜನೆಗೆ ಮುಂದಾಗ ಬೇಕಿದೆ.
- ಕೆ.ಎಸ್. ಮೂರ್ತಿ, ಕುಶಾಲನಗರ.