ಮಡಿಕೇರಿ, ಫೆ. ೧೯: ಭಯೋತ್ಪಾದಕ ಸಂಘಟನೆಗಳೊAದಿಗೆ ನಂಟಿರುವ ಕೆಲವು ಸಂಘಟನೆಗಳ ಕುಮ್ಮಕ್ಕಿನಿಂದ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್ ವಿಚಾರವಾಗಿ ಘರ್ಷಣೆ ಸೃಷ್ಟಿಗೆ ಕಾರಣರಾಗುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕೊಡಗು ಜಿಲ್ಲಾ ಘಟಕ ಗಂಭೀರ ಆರೋಪ ಮಾಡಿದೆ.

ನಗರದ ಭಾರತೀಯ ವಿದ್ಯಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಕ್ಕೇರ ಅಜಿತ್, ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತದ ಉಡುಪನ್ನು ಧರಿಸಲು ನಿರ್ಬಂಧಿಸಿ ನ್ಯಾಯಾಲಯದ ಮಧ್ಯಂತರ ಆದೇಶ ಜಾರಿಯಲ್ಲಿದ್ದರೂ ವಿದ್ಯಾರ್ಥಿಗಳು ನ್ಯಾಯಾಲಯ ಹಾಗೂ ಸಂವಿಧಾನಕ್ಕೆ ಗೌರವ ನೀಡದೆ ಪ್ರತಿಭಟನೆ ಮೂಲಕ ಅಶಾಂತಿ ಸೃಷ್ಟಿಸುತ್ತಿರುವುದು ಸರಿಯಲ್ಲ. ಪರಿಣಾಮ ವಿದ್ಯಾಲಯಗಳಲ್ಲಿ ಶಿಸ್ತಿನ ವಾತಾವರಣ ಹದಗೆಡುತ್ತಿದೆ. ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ಶಿಕ್ಷಕರ ವಿರುದ್ಧವೇ ಮಾತನಾಡುತ್ತಿರುವುದು ಸರಿಯಲ್ಲ. ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸಬೇಕೆಂದು ಹೇಳಿದರು.

ಕೆಲವು ಸಂಘಟನೆಗಳ ಮುಖಂಡರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿ ಅರಾಜಕತೆ ಸೃಷ್ಟಿಸುವ ಸಂಚು ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ಹಿಂದೆ ಕಾಣದ ಕೈಗಳು ಅಡಗಿವೆ ಎಂದು ಗಂಭೀರ ಆರೋಪ ಮಾಡಿದ ಅವರು, ಮತಾಂಧ ಸಂಘಟನೆಗಳ ಮುಖಂಡರನ್ನು ಬಂಧಿಸುವAತೆ ಆಗ್ರಹಿಸಿದರು.

(ಮೊದಲ ಪುಟದಿಂದ) ಶಿಕ್ಷಕರುಗಳು ತೀರ್ಪಿನ ಬಗ್ಗೆ ಮನವರಿಕೆ ಮಾಡಿದರೂ ಕೂಡ ವಿದ್ಯಾರ್ಥಿಗಳು ಮಾತು ಕೇಳದೆ ಅಸಭ್ಯವಾಗಿ ವರ್ತಿಸುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಣ ಬೇಕೆಂದರೆ ನಿಯಮಾನುಸಾರ ಶಾಲೆಗೆ ಬರಬೇಕು. ಅದನ್ನು ಹೊರತುಪಡಿಸಿ ಪ್ರತಿಭಟನೆ ನಡೆಸಿ ಗಲಭೆ ಸೃಷ್ಟಿಸುವ ಕೆಲಸ ಮಾಡಬಾರದು. ಪ್ರತಿಭಟನೆಯಿಂದ ಅನಾಹುತ ಸಂಭವಿಸಿದರೆ ಯಾರು ಹೊಣೆ ಎಂದು ಪ್ರಶ್ನಿಸಿದರು.

ಹಿಜಾಬ್ ಬಿಚ್ಚಿಟ್ಟು ಬರುವಂತೆ ಹೇಳಿದ ಮಡಿಕೇರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಇಂತವರನ್ನು ಪತ್ತೆಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಸುಭಾಷ್ ತಿಮ್ಮಯ್ಯ, ಮಾತೃ ಸುರಕ್ಷಾ ಪ್ರಮುಖ್ ಜಿಲ್ಲಾ ಸಂಯೋಜಕ ಎಸ್.ಜಿ. ತಿಮ್ಮಯ್ಯ, ಜಿಲ್ಲಾ ಸಂಪರ್ಕ ಪ್ರಮುಖ್ ಉಮೇಶ್, ವಿದ್ಯಾರ್ಥಿ ಪ್ರಮುಖ್ ಬ್ರಿಜೇಷ್ ಹಾಜರಿದ್ದರು.