ಮಡಿಕೇರಿ, ಫೆ. ೨೧: ಯುನೈಟೆಡ್ ಕೊಡವ ಆರ್ಗನೈಜೇಷನ್ (ಯುಕೊ)ಸಂಘಟನೆ ನಿಯೋಗ ಪ್ರಮುಖರು ಅಧ್ಯಕ್ಷ ಕೊಕ್ಕಲೇಮಾಡ ಮಂಜು ಚಿಣ್ಣಪ್ಪ ಅವರ ನೇತೃತ್ವದಲ್ಲಿ ಇಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಮಾತುಕತೆ ನಡೆಸಿದರು.
ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರ ಮುಂದಾಳತ್ವದಲ್ಲಿ ಗೃಹ ಕಚೇರಿ ಕಾವೇರಿಯಲ್ಲಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ನಿಯೋಗವು, ಕೊಡವ ಅಭಿವೃದ್ಧಿ ನಿಗಮದ ಕುರಿತಂತೆ ಸರ್ಕಾರಕ್ಕೆ ಈಗಾಗಲೇ ಮನವಿಯನ್ನು ಸಲ್ಲಿಸಲಾಗಿದ್ದು, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿಗಳನ್ನು ಬೆಳಗಾವಿಯಲ್ಲಿ ಕೊಡಗಿನ ಮೂವರು ಶಾಸಕರೊಂದಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಮುಂಬರುವ ಬಜೆಟ್‌ನಲ್ಲಿ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಮಾಡುವುದಾಗಿ ಭರವಸೆ ನೀಡಿರುವುದಾಗಿ ತಿಳಿಸಿದರು. ಈ ಕುರಿತಂತೆ, ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚು ರಂಜನ್ ಅವರು ಜಂಟಿಯಾಗಿ ಸಹಿ ಮಾಡಿದ ಪತ್ರವನ್ನು ನೀಡಿರುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಧುರೀಣರಾಗಿರುವ ಯಡಿಯೂರಪ್ಪ ಅವರ ಗಮನ ಸೆಳೆಯಲಾಯಿತು.
ಇದೀಗ ಮುಂಬರುವ ಮುಂಗಡ ಪತ್ರದಲ್ಲಿಯೇ ಕೊಡವ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಘೋಷಿಸುವಂತೆಯೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಶಿಫಾರಸ್ಸು ಮಾಡುವಂತೆ ಕೋರಲಾಯಿತು.
(ಮೊದಲ ಪುಟದಿಂದ) ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ ಅವರು, ಈ ವಿಷಯವಾಗಿ ಈಗಲೇ ಮುಖ್ಯಮಂತ್ರಿಗಳಿಗೆ ಅಧಿಕೃತವಾಗಿ ಶಿಫಾರಸ್ಸು ಪತ್ರ ರವಾನಿಸಲಾಗುವುದು ಹಾಗೂ ಖುದ್ದಾಗಿ ಮಾತನಾಡಿ ಕೊಡವ ಅಭಿವೃದ್ಧಿ ನಿಗಮದ ಕುರಿತಂತೆ ಮನವರಿಕೆ ಮಾಡುತ್ತೇನೆ. ಈ ಮುಂಬರುವ ಮುಂಗಡ ಪತ್ರದಲ್ಲಿ ಕೊಡವ ಅಭಿವೃದ್ಧಿ ನಿಗಮ ಘೋಷಣೆ ಆಗುವ ವಿಶ್ವಾಸವಿದೆ ಎಂದು ತಿಳಿಸಿದರು. ನಿಯೋಗದಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಕಾಟಿಮಾಡ ಗಿರಿ ಅಯ್ಯಪ್ಪ, ನೆಲ್ಲಮಕ್ಕಡ ಮಾದಯ್ಯ, ಬಿಜೆಪಿ ಕಾರ್ಯಕಾರಿಣಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಉಪಸ್ಥಿತರಿದ್ದರು.