ಕ್ಷೇತ್ರದಲ್ಲಿ ದೋಷಗಳ ಪರಿಹಾರ ನಿಮಿತ್ತ ಪೂರ್ವ ಭಾವಿ ಸಭೆ ಯೊಂದನ್ನು ತಾ. ೨೪-೪-೨೦೦೨ ರಂದು ಮಡಿಕೇರಿಯ ಕಚೇರಿಯಲ್ಲಿ ಕರೆಯಲಾಗಿತ್ತು, ವಿಘ್ನ ಪರಿಹಾರ ಸಮಿತಿ ಅಧ್ಯಕ್ಷನಾಗಿದ್ದ ನಾನು ಆ ಸಂದರ್ಭ ಈ ಕೆಳಗಿನ ವರದಿಯನ್ನು ಮಂಡಿಸಿದೆ.

ಅಧ್ಯಕ್ಷರಾದ ಮಾತಂಡ ಮೊಣ್ಣಪ್ಪ, ವಿಘ್ನ ಪರಿಹಾರ ಉಪ ಸಮಿತಿ ಅಧ್ಯಕ್ಷನಾಗಿದ್ದ ನಾನು, ಸದಸ್ಯರುಗಳಾದ ಕೋಡಿ ಚಂದ್ರಶೇಖರ್, ಪಿ. ಜಿ. ರಾಧಾಕೃಷ್ಣ, ಶ್ರೀಮತಿ ಪೊನ್ನೇಟಿ ಶಾಂತಿ, ಜಿ.ಪಂ. ಸದಸ್ಯರಾದ ಹೆಚ್. ಜೆ. ಸತೀಶ್ ಕುಮಾರ್, ದೇವಸ್ಥಾನ ವ್ಯವಸ್ಥಾಪನಾ ನಿಧಿ ಸದಸ್ಯರುಗಳಾದ ರವೀಂದ್ರ ಹೆಬ್ಬಾರ್ ಹಾಗೂ ಕೆ. ಟಿ. ರಮೇಶ್, ಕ್ಷೇತ್ರ ಅರ್ಚಕರುಗಳಾದ ಟಿ. ಆರ್. ವಿಠಲಾಚಾರ್, ಪ್ರಶಾಂತಾಚಾರ್, ಟಿ. ಎಸ್. ನಾರಾಯಣಾಚಾರ್ (ಈಗ ದಿವಂಗತರು) ಇವರುಗಳು ಹಾಜರಿದ್ದು ಪರಿಹಾರ ಕಾರ್ಯಗಳ ಚಾಲನೆಯ ಜವಾಬ್ದಾರಿ ವಹಿಸಿಕೊಂಡೆವು.

ತಲಕಾವೇರಿಯಲ್ಲಿ ತಾ. ೩೦-೪-೨೦೦೨ ರಿಂದ ತಾ. ೨-೫-೨೦೦೨ ರವರೆಗೆ ಕ್ಷೇತ್ರದ ತಂತ್ರಿಯವರಾದ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿ (ಈಗ ದಿವಂಗತರು. ಈಗ ಅವರ ಪುತ್ರರಿದ್ದಾರೆ) ಯವರ ನೇತೃತ್ವದಲ್ಲಿ ಕ್ಷೇತ್ರದ ಬಾಧಾ ನಿವಾರಣೆಗಾಗಿ ಸುದರ್ಶನ ಹೋಮ, ಅಘೋರ ಹೋಮ, ತಿಲಹೋಮ, ಪವಮಾನ ಹೋಮ, ಸಾಲಿಗ್ರಾಮ ಸಾಯುಜ್ಯ, ತ್ರಿಕಾಲ ಪೂಜೆ, ಗಣಹೋಮ, ಆಶ್ಲೇಷ ಬಲಿ, ದ್ವಾದಶ ಮೂರ್ತಿ ಆರಾಧನೆ, ಪ್ರೋಕ್ತ ಹೋಮ, ಕಲಶಾಭಿಷೇಕ, ಪ್ರೇತಬಾಧೆಗಳ ಆವಾಹನೆ, ಭೂತ ಮಾರಣ ಬಲಿ ಉಚ್ಛಾಟನೆ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೆÆÃಘ್ನ ಹೋಮ, ವಾಸ್ತು ಬಲಿ, ವಾಸ್ತು ಕಲಶ ಪೂಜೆ, ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ತತ್ತ÷್ವ ಹೋಮ, ಕಲಶ ಪೂಜೆ, ಅನುಜ್ಞಾ ಕಲಶ ಪೂಜೆ, ಖನನಾದಿ ಸಪ್ತ ಶುದ್ದಿ, ಮಂಟಪ ಸಂಸ್ಕಾರ ಹೋಮ, ಪರಿವಾರ ಪ್ರಾರ್ಥನೆ ಗಳನ್ನು ನೆರವೇರಿಸಲಾಯಿತು. ಪ್ರತಿದಿನ ಅನ್ನಸಂತರ್ಪಣೆಯನ್ನು ವ್ಯವಸ್ಥೆಗೊಳಿಸಲಾಗಿತ್ತು. ಈ ಎಲ್ಲ ಕಾರ್ಯಗಳಿಗೆ ಒಟ್ಟು ರೂ.೬೩,೩೭೨ ಖರ್ಚಾಗಿದೆ.

ಪರಿಹಾರ ಕಾರ್ಯಕ್ರಮಗಳು ಆಗಲೇಬೇಕು ಎಂದು ಪ್ರಾರಂಭದಲ್ಲಿಯೇ ಪ್ರೋತ್ಸಾಹಿಸಿದವರು ಜಿಲ್ಲಾಧಿಕಾರಿ ಪಾಲಾಕ್ಷ (ಈಗ ದಿವಂಗತರು) ಅವರು. ಅಲ್ಲದೆ, ಇದಕ್ಕಾಗಿ ರೂ.೧ ಲಕ್ಷ ಹಣವನ್ನೂ ದೇವಸ್ಥಾನ ವ್ಯವಸ್ಥಾಪನಾ ನಿಧಿ ಪರವಾಗಿ ಒದಗಿಸಿದರು. ಜೊತೆಗೆ ತಲಕಾವೇರಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಗಳ ಕೊನೆಯ ದಿನದಂದು ಅವರು ಆಗಮಿಸಿ ಪಾಲ್ಗೊಂಡರು. ದಾನ ಮೊದಲಾದ ಕಾರ್ಯಕ್ರಮಗಳಲ್ಲಿ ಪ್ರಾಯೋಗಿಕವಾಗಿ ಭಾಗವಹಿಸಿದರು.

ಭಾಗಮಂಡಲ ಸನಿಹದ ತಾವೂರು, ಚೇರಂಗಾಲ, ಕೋರಂಗಾಲ ಗ್ರಾಮಗಳ ದೇಗುಲಗಳಲ್ಲಿ ಸಮಿತಿಯ ಪರವಾಗಿ ವಿಶೇಷ ಪೂಜೆಗಳನ್ನು ಸ್ಥಳೀಯ ಪ್ರಮುಖರಾದ ಹೆಚ್. ಡಿ. ಜೋಯಪ್ಪ (ಈಗ ದಿವಂಗತರು) ಅವರು ನೆರವೇರಿಸಿದರು. ಅದೇ ರೀತಿ ತೊಡಿಕಾನ ಹಾಗೂ ಪೆರಾಜೆಗಳಿಗೆ ತೆರಳಿ ಅರ್ಚಕ ವರ್ಗದವರಾದ ಟಿ. ಎಸ್. ನಾರಾಯಣಾಚಾರ್ ಮತ್ತಿತರರು ನಡೆಸಿಕೊಟ್ಟರು. ಸರ್ಪ ಸಂಸ್ಕಾರ ಹಾಗೂ ಆಶ್ಲೇಷ ಬಲಿ ಕಾರ್ಯಕ್ರಮಗಳನ್ನು ಅರ್ಚಕ ವರ್ಗದವರಾದ ಟಿ. ಆರ್. ವಿಠಲಾಚಾರ್ ಅವರು ಭಾಗಮಂಡಲದ ಕ್ಷೇತ್ರ ಪುರೋಹಿತರಾದ ಅನಂತಭಟ್ (ಈಗ ದಿವಂಗತರು)ಅವರ ಸಹಕಾರದಿಂದ ನೆರವೇರಿಸಿದರು. ಅಲ್ಲದೆ, ಟಿ. ಎಸ್. ನಾರಾಯಣಾಚಾರ್ ಅವರ ಸಹಕಾರ ದೊಂದಿಗೆ ಆದಿ ಸುಬ್ರಮಣ್ಯಕ್ಕೆ ತೆರಳಿ ಆಶ್ಲೇಷ ಬಲಿ ಇತ್ಯಾದಿ ಪೂಜೆಗಳನ್ನು ನಡೆಸಿ ಸರ್ಪಸಂಸ್ಕಾರ ವಿಧಿ ವಿಧಾನವನ್ನು ಪೂರ್ಣಗೊಳಿಸಿದರು.

ಆವಾಹಿತ ಬಾಧಾ ಶಕ್ತಿಗಳ ವಿಸರ್ಜನೆ ಹಾಗೂ ಗೋಹತ್ಯಾ ದೋಷ ನಿವಾರಣೆ ಇತ್ಯಾದಿ ಉದ್ಧೇಶಕ್ಕಾಗಿ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದAತೆ ನಿವಾರಣಾರ್ಥ ಉಡುಪಿಯ ಶ್ರೀ ಕೃಷ್ಣ ದೇಗುಲ, ಕೊಲ್ಲೂರಿನ ಶ್ರೀ ಮೂಕಾಂಬಿಕಾ ಮತ್ತು ಕೊಡಚಾದ್ರಿ ಕ್ಷೇತ್ರಗಳಿಗೆ ಸಮಿತಿ ಪರವಾಗಿ ನಾನು, ಸಂಪತ್‌ಕುಮಾರ್, ಕೋಡಿ ಚಂದ್ರಶೇಖರ್ (ಈಗ ದೈವಾಧೀನರು) ಹಾಗೂ ಪ್ರಶಾಂತ್ ಆಚಾರ್ ತೆರಳಿದ್ದೆವು. ಉಡುಪಿಯಲ್ಲಿ ಪರ್ಯಾಯ ಪೀಠಾಧಿಪತಿ ಶ್ರೀ ಫಲಿಮಾರು ಮಠಾಧೀಶರು ರೂ. ೨೫೦ನ್ನು ನಮ್ಮ ಕೈಗೆ ನೀಡಿ ಕಾವೇರಿ ಮಾತೆಯ ಸೇವಾ ನಿಧಿಗೆ ಇದು ಅಕ್ಷಯ ನಿಧಿಯಾಗಲಿ ಎಂದು ಹಾರೈಸಿದರು. ಅದೇ ದಿನ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರನ್ನು (ಈಗ ದೈವಾಧೀನರು) ಕೂಡ ನಾವು ಭೇಟಿಯಾಗುವ ಅವಕಾಶ ಲಭ್ಯವಾಯಿತು. ತಲಕಾವೇರಿ ಜೀರ್ಣೋದ್ಧಾರ ಕಾರ್ಯಕ್ಕೆ ನಮ್ಮನ್ನು ಹರಸುವದರೊಂದಿಗೆ ತಮ್ಮ ಸಂಪೂರ್ಣ ಸಹಕಾರವಿರುವದಾಗಿ ಶ್ರೀ ಪೇಜಾವರ ಮಠಾಧೀಶರು ಆಶೀರ್ವಚನವಿತ್ತರು.

ತಲಕಾವೇರಿಯಲ್ಲಿ ನಡೆದ ಮೂರು ದಿನಗಳ ಕಾರ್ಯಕ್ರಮಗಳ ಸಂದರ್ಭ ಸಮಿತಿ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರು ೧ ಕ್ವಿಂಟಾಲ್ ಅಕ್ಕಿ ನೀಡಿದರು. ಅಲ್ಲದೆ, ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮನ್ನು ತೊಡಗಿಸಿಕೊಂಡರು. ಸಮಿತಿ ಸದಸ್ಯರುಗಳಾದ ಕೋಡಿ ಚಂದ್ರಶೇಖರ್, ಕಂಬೀರAಡ ನಂಜಪ್ಪ (ಈಗ ದಿವಂಗತರು), ಮಂದಪAಡ ಸತೀಶ್, ಪಿ. ಜಿ. ರಾಧಾಕೃಷ್ಣ ಇವರುಗಳು ಈ ಮೂರು ದಿನದ ಕಾರ್ಯಕ್ರಮಕ್ಕೆ ಸಹಕರಿಸಿದರು. ಅಲ್ಲದೆ ಅರ್ಚಕ ಕುಟುಂಬದವರು ಹಾಗೂ ದೇವಸ್ಥಾನ ವ್ಯವಸ್ಥಾಪನಾ ನಿಧಿಯ ಸದಸ್ಯರುಗಳಾದ ರವೀಂದ್ರ ಹೆಬ್ಬಾರ್ ಹಾಗೂ ಕೆ. ಟಿ. ರಮೇಶ್ ಇವರುಗಳು ಸಹಕಾರವಿತ್ತರು.

ಧಾರ್ಮಿಕ ಆಚರಣೆಗಳಿಗೆ ಮುಕ್ತಾಯ ಹಂತವಾಗಿ ತಾ. ೨೬-೫-೨೦೦೨ ರಂದು ಟಿ. ಎಸ್. ನಾರಾಯಣಾಚಾರ್ ಮತ್ತಿತರ ಅರ್ಚಕ ಕುಟುಂಬದವರ ಸಹಕಾರದಿಂದ ತಲಕಾವೇರಿಯಲ್ಲಿ ಭಗವಾನ್ ಅಗಸ್ತೆö್ಯÃಶ್ವರನಿಗೆ ಶತರುದ್ರಾಭಿಷೇಕ ಹಾಗೂ ಮಾತೆ ಕಾವೇರಿಗೆ ಲಕ್ಷ ನಾಮಾರ್ಚನೆಗಳು ಸಾಂಗವಾಗಿ ನೆರವೇರಿದವು. ಈ ಸಂದರ್ಭ ಸಮಿತಿ ಸದಸ್ಯರಾದ, ಸಾಹಿತಿಗಳಾದ ಎದುರ್ಕಳ ಶಂಕರನಾರಾಯಣ ಭಟ್ (ಈಗ ದಿವಂಗತರು) ಅವರು ಆಸಕ್ತಿಯಿಂದ ಕ್ರಿಯಾತ್ಮಕವಾಗಿ ಪಾಲ್ಗೊಂಡರು. ಅಲ್ಲದೆ ಅಂತಿಮ ದಿನ ಕೇರಳದ ಋತ್ವಿಜರಿಂದ ರುದ್ರ ಶಾಂತಿ ಯಾಗವು ಯಶಸ್ವಿಯಾಗಿ ನಡೆದಿತ್ತು.

ಮೊದಲ ಹಂತವಾಗಿ ಅಷ್ಟ ಮಂಗಲ ಪ್ರಶ್ನೆ, ದ್ವಿತೀಯ ಹಂತವಾಗಿ ದೋಷ ಪರಿಹಾರ ಕಾರ್ಯಗಳು ಸುಸೂತ್ರವಾಗಿ ಮುಕ್ತಾಯಗೊಂಡಿವೆ. ಆ ಮೂಲಕ ಜೀರ್ಣೋದ್ಧಾರ ಕೆಲಸಕ್ಕೆ ಉತ್ಸಾಹದ ಚಾಲನೆ ದೊರೆತಿದೆ. ಕಂಕಣಬದ್ಧರಾಗಿ ನಾವೆಲ್ಲ ಇನ್ನು ಮುಂದಿನ ಪುಣ್ಯ ಕಾರ್ಯದಲ್ಲಿ ತೊಡಗಿಸಿಕೊಳ್ಳೋಣ ಎಂದು ನನ್ನ ವರದಿಯನ್ನು ಮುಗಿಸಿದೆ.

ಆ ಸಂದರ್ಭ ನನ್ನ ವರದಿಯಲ್ಲಿ ಈ ಕೆಳಗಿನಂತೆಯೂ ಪ್ರಸ್ತಾಪಿಸಿದ್ದೆ

ಒಂದೆಡೆ ಪ್ರಕೃತಿಯ ರಮ್ಯ ನೋಟ, ಮತ್ತೊಂದೆಡೆ ಸಂಪೂರ್ಣ ಮಂಜು ಆವರಿಸಿದ ಸನ್ನಿವೇಶ, ಭಾರತದ ಪುಣ್ಯ ನದಿ ಕಾವೇರಿಯ ಉಗಮ ಸ್ಥಾನದ ಈ ರೋಮಾಂಚಕ ದೃಶ್ಯದ ನಡುವೆ ತಾಂತ್ರಿಕ, ವೈದಿಕ ಕ್ರಿಯೆಗಳ ದರ್ಶನ. ‘‘ಆಹಾ ಇದು ಭಾಗ್ಯ ಇದು ಭಾಗ್ಯವಯ್ಯ’’ ಎಂಬ ದಾಸವಾಣಿಯ ನೆನಪಿಗೆ ತರುವ ಸಂದರ್ಭವದು.

ಹಗಲು ರಾತ್ರಿಯೆನ್ನದೆ ನಡೆದ ಹೋಮ-ಹವನಾದಿ ಧಾರ್ಮಿಕ ಕ್ರಿಯೆಗಳು ಮೂಲ ಕಾವೇರಿ ಸನ್ನಿಧಿಯಲ್ಲಿ ಹೆಚ್ಚಿನ ಕಳೆ ಮೂಡಿಸಿದ್ದುದನ್ನು ಹಾಜರಿದ್ದ ಪ್ರತಿಯೊಬ್ಬ ಭಕ್ತಾದಿಗಳೂ ಕಂಡುಕೊAಡಿದ್ದಾರೆ. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದAತೆ ರಾಜರ ಆಳ್ವಿಕೆಯ ಐತಿಹಾಸಿಕ ಕಾಲದಿಂದಲೂ ಅನೇಕ ದೋಷಗಳು ಪರಿಹಾರಗೊಳ್ಳದೆ ದ್ವಿಗುಣಗೊಳ್ಳುತ್ತ ಬಂದವು. ಕ್ಷೇತ್ರದಲ್ಲಿ ಸಂಭವಿಸಿದ ಅನೇಕ ದುರ್ಘಟನೆಗಳೂ ಈ ದುಶ್ಯಕ್ತಿಗಳ ಪ್ರಭಾವ ಹೆಚ್ಚಿಸಿದವು. ಹೀಗಾಗಿ ಪವಿತ್ರ ಕ್ಷೇತ್ರದ ನೈಜ ಪ್ರಕಾಶ ಮರೆಯಾಗಿ ಮಬ್ಬು ಕವಿದಿತ್ತು. ಇದೀಗ ಕತ್ತಲೆ ಮಾಯವಾಗಿ ‘‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ’’ ಎನ್ನುವ ನುಡಿ ಸಹಜ ಸ್ಥಿತಿಯಲ್ಲಿ ಪ್ರತಿಫಲಿಸುತ್ತಿದೆ.

ನಾವು ತಿಳಿಯುತ್ತೇವೆ. ಈ ಧಾರ್ಮಿಕ ವಿಧಿ ವಿಧಾನಗಳು ಕೇವಲ ಪ್ರದರ್ಶನಗಳಾಗಿರಬಹುದು ಎಂದು. ಇದು ಸಾಮಾನ್ಯ ಪರಿಜ್ಞಾನದಿಂದ ಹೊರಹೊಮ್ಮುವ ವಾದಗಳಷ್ಟೆ. ಏಕೆಂದರೆ, ತಲಕಾವೇರಿಯಲ್ಲಿ ಆವಾಹಿಸಲ್ಪಟ್ಟ ಅನೇಕ ಬಾಧಾಶಕ್ತಿಗಳನ್ನು ಸಮಿತಿಯ ಪರವಾಗಿ ನಾವು ಕೆಲವರು ಕೊಲ್ಲೂರು ಕೊಡಚಾದ್ರಿಯವರೆಗೂ ಒಯ್ದೆವು. ಕೊಡಚಾದ್ರಿಗೆ ತೆರಳುತ್ತಿದ್ದ ಮಾರ್ಗ ಮಧ್ಯೆ ದಿಢೀರ್ ನಾಗವೊಂದು ಪ್ರತ್ಯಕ್ಷವಾಯಿತು. ಕೆಳಗಿಳಿದು ನಮಿಸಿದೆವು. ಎತ್ತಿದ್ದ ಹೆಡೆಯನ್ನು ಇಳಿಸಿ ನಿಧಾನಗತಿಯಲ್ಲಿ ನಾಗವನ ಪ್ರದೇಶಕ್ಕೆ ತೆರಳಿತು. ಮತ್ತೆ ಕೊಡಚಾದ್ರಿಯಿಂದ ಹಿಂತಿರುಗುವಾಗಲೂ ಮಾರ್ಗ ಮಧ್ಯೆ ಬೇರೆ ಒಂದು ಪ್ರದೇಶದಲ್ಲಿ ಇದೇ ರೀತಿ ಮತ್ತೊಂದು ನಾಗ ನಮ್ಮ ವಾಹನದ ಮುಂಭಾಗ ಎದುರಾಯಿತು. ಆಗಲೂ ಹಿಂದಿನ ರೀತಿಯ ಚಿತ್ರಣವ ಗೋಚರ ವಾಯಿತು. ಆಗ ಸರ್ಪ ಸಂಸ್ಕಾರ ಕ್ರಿಯೆ ಇನ್ನೂ ಆಗಿರಲಿಲ್ಲ. ಇದಕ್ಕೋಸ್ಕರ ನಮಗೆ ನೆನಪು ಮೂಡಿಸುತ್ತಿರಬೇಕು ಎಂಬ ಚಿಂತನೆ ನಮ್ಮದಾಗಿತ್ತು. ಜೊತೆಗೆ ಒಂದು ಶಕ್ತಿ ನಮಗೆ ಸೂಕ್ತ ನಿರ್ದೇಶನ ಕೊಡುತ್ತಿದೆ ಎಂಬದರ ಅರಿವಾಯಿತು. ಎಲ್ಲಕ್ಕಿಂತ ಮುಖ್ಯವಾಗಿ ಪರಿಹಾರಕ್ಕೆ ಅಗತ್ಯವಾದ ಹಣವನ್ನು ಹೊಸ ಜೀರ್ಣೋದ್ಧಾರ ಸಮಿತಿಗೆ ಮನಃಪೂರ್ವಕವಾಗಿ ನೂತನ ಜಿಲ್ಲಾಧಿಕಾರಿ ಪಾಲಾಕ್ಷ ಅವರು ದೇವಸ್ಥಾನ ವ್ಯವಸ್ಥಾಪನಾ ನಿಧಿ ಸಮಿತಿ ಪರವಾಗಿ ಮಂಜೂರು ಮಾಡಿದುದು ಒಂದು ಸುಯೋಗವೆನ್ನಬಹುದು. ಜೊತೆಗೆ ಕೊಡಗು ಏಕೀಕರಣ ರಂಗದಿAದಲೂ ಆರ್ಥಿಕ ನೆರವು ನೀಡಲಾಗಿತ್ತು. ಅದೇ ರೀತಿ, ಅರ್ಚಕ ವರ್ಗ, ಜನಪ್ರತಿನಿಧಿಗಳು, ಸ್ಥಳೀಯ ನಾಗರಿಕರ ಸಹಕಾರದಿಂದ ಅಷ್ಟಮಂಗಲದಲ್ಲಿ ಗೋಚರವಾದ ಎಲ್ಲ ದೋಷಗಳ ಪರಿಹಾರ ಪೂರ್ಣಗೊಂಡಿದೆ. ವಿವಿಧ ಪವಿತ್ರ ಕ್ಷೇತ್ರಗಳ ಸಂದರ್ಶನ ಪೂರೈಸಲ್ಪಟ್ಟಿದೆ. ಜೀರ್ಣೋದ್ಧಾರದ ಮುಂದಿನ ದಾರಿ ಸುಗಮವಾಗಿದೆ.

ಈ ಹಿಂದೆ ಎರಡು ಬಾರಿ ಪರಿಹಾರ ಕಾರ್ಯಕ್ರಮಗಳಿಗೆ ಅಡ್ಡಿಯುಂಟಾ ಗಿದ್ದು, ಇದರಿಂದ ಕ್ಷೇತ್ರ ಪುರೋಹಿತರಾದ ಶ್ರೀ ನೀಲೇಶ್ವರ ಪದ್ಮನಾಭ ತಂತ್ರಿಯವರು ನೊಂದಿದ್ದರೂ ಆ ಬಳಿಕ ಭೇಟಿ ಮಾಡಿದ ನಮ್ಮ ಸಮಿತಿಯ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಅವರ ಕೋರಿಕೆಗೆ ಮನ್ನಣೆ ನೀಡಿ ಕ್ಷೇತ್ರದಲ್ಲಿ ಪರಿಹಾರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿ ಕೊಟ್ಟಿರುವದು ಅವಿಸ್ಮರಣೀಯ. ಅಲ್ಲದೆ, ಪರಿಹಾರ ಸಂಬAಧ ಕ್ಷೇತ್ರ ದರ್ಶನಕ್ಕೆ ತೆರಳಿದ ನಮಗೆ ಎಲ್ಲ ಕಡೆ ಪೂಜಾದಿ ವಿಧಿಗಳು ನಿರಾತಂಕವಾಗಿ ಹಾಗೂ ಸಾಂಗವಾಗಿ ನೆರವೇರಿದ್ದು ಮತ್ತೊಂದು ವಿಶೇಷವೆನಿಸಿತ್ತು. (ಮುಂದುವರಿಯುವುದು)

- ಜಿ. ರಾಜೇಂದ್ರ, ಮಡಿಕೇರಿ.