ಮಡಿಕೇರಿ, ಫೆ. ೧೯: ಮಡಿಕೇರಿ ತಾಲೂಕಿನ ಪೆರಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ೧.೨೫ ಕೋಟಿ ರೂ. ಮತ್ತು ಚೆಂಬು ಗ್ರಾ.ಪಂ.ವ್ಯಾಪ್ತಿಯಲ್ಲಿ ೭ ಕೋಟಿ ರೂ. ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮತ್ತು ಸಂಸದÀ ಪ್ರತಾಪ್ ಸಿಂಹ ನೆರವೇರಿಸಿದರು.
ಆರಂಭದಲ್ಲಿ ಪೆರಾಜೆ ಗ್ರಾಮದ ಶಾಸ್ತಾವು ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಶಾಸ್ತಾವು ದೇವಸ್ಥಾನದ ತಡೆಗೋಡೆ, ದೇವಸ್ಥಾನದ ಆವರಣದಲ್ಲಿ ಇಂಟರ್ ಲಾಕ್ ಅಳವಡಿಕೆ, ಅಮೆಚೂರು-ತೊಡಿಕಾನ ರಸ್ತೆಯ ಸೇತುವೆ ನಿರ್ಮಾಣ, ವಯನಾಟ್ ಕುಲವನ್ ದೇವಸ್ಥಾನದ ಬಳಿ ತಡೆಗೋಡೆ, ಸಮುದಾಯ ಭವನ, ಪೆರುಮುಂಡ-ಪಾಳ್ಯ-ಕುAಡಾಡು ಗಿರಿಜನ ಕಾಲೋನಿ ಮತ್ತು ನಿಡ್ಯಮಲೆ ಬಳಿಯ ಗಿರಿಜನ ಕಾಲೋನಿ ರಸ್ತೆ ಕಾಂಕ್ರೀಟೀಕರಣ, ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ, ಕುಂಡಾಡು-ಕಡ್ಯ ಕರಿಭೂತನಕೋಡಿ ರಸ್ತೆ ಕಾಂಕ್ರೀಟೀಕರಣ, ಕಡ್ಯ-ಕರಿಭೂತನಕೋಡಿ ರಸ್ತೆಯ ಸೇತುವೆ ನಿರ್ಮಾಣ, ಪೆರಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಾಣ, ಪೆರಾಜೆ ಗ್ರಾ.ಪಂ.ಆವರಣ ಮತ್ತು ಪರಿಶಿಷ್ಟ ಪಂಗಡ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಡಿಜಿಟಲ್ ಗ್ರಂಥಾಲಯ ಇವುಗಳನ್ನು ಶಾಸಕರು ಮತ್ತು ಸಂಸದರು ಉದ್ಘಾಟಿಸಿದರು.
(ಮೊದಲ ಪುಟದಿಂದ) ಅಮೆಚೂರು-ಕೋಡಿ-ಕೋಟೆ ಪೆರಾಜೆ ರಸ್ತೆ ನಿರ್ಮಾಣ, ಕೊಡ್ಯಗುಂಡಿ ಗಿರಿಜನ ಕಾಲೋನಿ ರಸ್ತೆ ನಿರ್ಮಾಣ, ಕುಂಬಳಚೇರಿ-ಬAಡಸಾಲೆ ರಸ್ತೆ ನಿರ್ಮಾಣ, ನಿಡ್ಯಮಲೆ-ಹಾಲೆಕಾಡು ರಸ್ತೆಗೆ ಕಾಂಕ್ರೀಟ್ ಅಳವಡಿಕೆ, ಪೆರಾಜೆ ಗ್ರಾ.ಪಂ. ವ್ಯಾಪ್ತಿಯ ೧೮ ಕಡೆಗಳಲ್ಲಿ ಮೋರಿ ನಿರ್ಮಾಣ, ಪೆರಾಜೆ-ಗಡಿಗುಡ್ಡೆ ರಸ್ತೆ ಮರು ಡಾಂಬರೀಕರಣ, ಕುಂಡಾಡು-ಚಾಮಕಜೆ ರಸ್ತೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕರು ಮತ್ತು ಸಂಸದರು ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ೨೦೨೪ ರೊಳಗೆ ಗ್ರಾಮೀಣ ಪ್ರದೇಶದ ಪ್ರತೀ ಕುಟುಂಬಕ್ಕೂ ನಲ್ಲಿ ನೀರು ಒದಗಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಪೆರಾಜೆ ಗ್ರಾ.ಪಂ.ಗೆ ೧.೮೦ ಕೋಟಿ ರೂ. ಬಿಡುಗಡೆ ಆಗಿದೆ. ಪೆರಾಜೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಇದುವರೆಗೆ ವಿದ್ಯುತ್ ಸಂಪರ್ಕ ಪಡೆಯದಿರುವ ಕುಟುಂಬ ಗಳು ಇದ್ದಲ್ಲಿ ಬೆಳಕು ಯೋಜನೆಯಡಿ ಕೂಡಲೇ ವಿದ್ಯುತ್ ಸಂಪರ್ಕ ಪಡೆಯುವಂತೆ ಶಾಸಕರು ಹೇಳಿದರು.
ಕಾಫಿ ಜೊತೆಗೆ ಅಡಿಕೆ ಬೆಳೆಗೂ ಸಹ ಬೆಳೆ ಪರಿಹಾರ ಸಿಗುತ್ತಿದೆ. ಕೃಷಿ ಸಮ್ಮಾನ್ ಯೋಜನೆಯಡಿ ರೈತರ ಖಾತೆಗೆ ಕಾಲ ಕಾಲಕ್ಕೆ ಬೆಳೆ ಹಾನಿ ಪರಿಹಾರ ಜಮೆಯಾಗುತ್ತಿದೆ. ಬೆಳೆ ಪರಿಹಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರದ ಹಂತದಲ್ಲಿ ಪ್ರಯತ್ನಿಸ ಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತೀ ಗ್ರಾಮವನ್ನು ಅಭಿವೃದ್ಧಿ ಪಡಿಸುವಲ್ಲಿ, ಪ್ರತೀ ಗ್ರಾ.ಪಂ. ಗಳಲ್ಲಿ ‘ಡಿಜಿಟಲ್ ಗ್ರಂಥಾಲಯ’ ಸ್ಥಾಪಿಸುತ್ತಿದೆ. ವಿದ್ಯಾರ್ಥಿಗಳು ಇದನ್ನು ಬಳಸಿಕೊಂಡು ಕೇಂದ್ರ ಮತ್ತು ರಾಜ್ಯ ನಾಗರಿಕ ಸೇವೆಯಲ್ಲಿ ಉನ್ನತ ಹುದ್ದೆ ಪಡೆಯುವಂತಾಗಬೇಕು ಎಂದು ಕರೆ ನೀಡಿದರು.
ರಸ್ತೆ ಅಗಲೀಕರಣಕ್ಕೆ ಕ್ರಮ: ಸಂಸದ ಪ್ರತಾಪ್ ಸಿಂಹ ಮಾತನಾಡಿ ಸರ್ಕಾರ, ಈಗಾಗಲೇ ಶ್ರೀರಂಗಪಟ್ಟಣ ದಿಂದ ಕುಶಾಲನಗರದವರೆಗೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಿದೆ. ಆ ದಿಸೆಯಲ್ಲಿ ಮುಂದಿನ ಹಂತದಲ್ಲಿ ಮಡಿಕೇರಿಯಿಂದ ಬಂಟ್ವಾಳದವರೆಗೆ ರಸ್ತೆ ಅಗಲೀಕರಣಕ್ಕೆ ಕ್ರಮವಹಿಸಲಾಗುವುದು. ಕಳೆದ ಎರಡು ವರ್ಷಗಳಿಂದ ಕೊರೊನಾ ದಿಂದ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿತ್ತು, ಈಗ ಚೇತರಿಸಿ ಕೊಳ್ಳುತ್ತಿದೆ. ಗ್ರಾ.ಪಂ. ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ನಿರೀಕ್ಷೆ ಮೀರಿ ಚುರುಕುಗೊಳ್ಳುತ್ತಿದೆ ಎಂದರು.
ಜಿಲ್ಲಾ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ಪ್ಲಾö್ಯಂಟ್ ನಿರ್ಮಿಸುವ ಮೂಲಕ ಜನರ ಪ್ರಾಣ ಮತ್ತು ಜೀವದ ರಕ್ಷಣೆಗೆ ಸರ್ಕಾರ ಆದ್ಯತೆ ನೀಡಿರುವುದು ಶ್ಲಾಘನೀಯ ಕಾರ್ಯ. ಸರ್ಕಾರ ಹೆದ್ದಾರಿ, ರೈಲ್ವೆ ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡುವುದರ ಜೊತೆಗೆ, ರಾಜ್ಯದ ೩೦ ನಗರಗಳಲ್ಲಿ ಅಡುಗೆ ಅನಿಲ ಪೈಪ್‌ಲೈನ್ ಅಳವಡಿಸಲು ಮುಂದಾಗಲಾಗಿದೆ. ಹೀಗೆ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆಗಳು ಆಗುತ್ತಿವೆ ಎಂದು ಸಂಸದರಾದ ಪ್ರತಾಪ್ ಸಿಂಹ ಅವರು ಹೇಳಿದರು.
ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಮಾತನಾಡಿ, ಸರ್ಕಾರ ಗ್ರಾಮೀಣ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಹೀಗೆ ಹಲವು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದೆ. ಇತ್ತೀಚೆಗೆ ಎಲ್ಲಾ ಗ್ರಾ.ಪಂ. ಮಟ್ಟದ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಹಾಗೆಯೇ ವಿದ್ಯಾರ್ಥಿ ನಿಲಯಗಳಲ್ಲಿಯೂ ಸಹ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ, ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷರಾದ ಎಸ್. ರವಿಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಪೆರಾಜೆ ಗ್ರಾ.ಪಂ.ಅಧ್ಯಕ್ಷೆ ಚಂದ್ರಕಲಾ ಬಾಲಚಂದ್ರ, ಉಪಾಧ್ಯಕ್ಷೆ ಜಯಲಕ್ಷಿö್ಮ ಧರಣೀದರ, ಚೆಂಬು ಗ್ರಾ.ಪಂ. ಅಧ್ಯಕ್ಷ ಕುಸುಮ, ಮಡಿಕೇರಿ ತಾಲೂಕು ಅಕ್ರಮ ಸಮಿತಿ ಸದಸ್ಯ ಸುಬ್ರಮಣ್ಯ ಉಪಾಧ್ಯಾಯ ಇತರರು ಇದ್ದರು.