ಸೋಮವಾರಪೇಟೆ, ಫೆ.೧೮: ನಿರ್ಗತಿಕ ಬಡವರಿಗೆ ನಿವೇಶನ ಒದಗಿಸಲು ಹಿಂದೇಟು ಹಾಕುತ್ತಿರುವ ರಾಜ್ಯ ಸರ್ಕಾರ, ಸರ್ಕಾರಿ ಭೂಮಿಗಳನ್ನು ಖಾಸಗಿ ಬೃಹತ್ ಉದ್ದಿಮೆಗಳಿಗೆ ನೀಡಲು ಮುಂದಾಗಿರುವುದು ಖಂಡನೀಯ. ಇದನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ ಭಾರತ ಕಮ್ಯೂನಿಸ್ಟ್ ಪಕ್ಷದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ಕಕ್ಕೆಹೊಳೆ ಜಂಕ್ಷನ್‌ನಿAದ ಪ್ರತಿಭಟನಾ ಮೆರವಣಿಗೆ ನಡೆಸಿದ ಪಕ್ಷದ ಕಾರ್ಯಕರ್ತರು, ಮಡಿಕೇರಿ ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಬಸ್ ನಿಲ್ದಾಣದ ಮೂಲಕ ತೆರಳಿ ತಾಲೂಕು ಕಚೇರಿ ಎದುರು ಧರಣಿ ನಡೆಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಕಾರ್ಯಕರ್ತರು, ಖಾಸಗಿ ಕಂಪೆನಿಗಳಿಗೆ ಸರ್ಕಾರಿ ಜಾಗವನ್ನು ಗುತ್ತಿಗೆ ನೀಡುವ ಮೂಲಕ, ರಾಜ್ಯದ ವಸತಿಹೀನರನ್ನು ಇನ್ನಷ್ಟು ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕು ಕಚೇರಿ ಎದುರು ನಡೆದ ಧರಣಿಯಲ್ಲಿ ಮಾತನಾಡಿದ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ರಾಜ್ಯದಲ್ಲಿ ೧೯.೩೯ ಲಕ್ಷ ಎಕರೆ ಸರ್ಕಾರಿ ಜಮೀನಿದ್ದು, ಇದನ್ನು ಸಂಘ, ಸಂಸ್ಥೆ, ಧಾರ್ಮಿಕ ಕೇಂದ್ರದ ಟ್ರಸ್ಟ್, ಬೃಹತ್ ಉದ್ದಿಮೆಗಳಿಗೆ ನೀಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಕಂದಾಯ ಇಲಾಖಾ ಸಚಿವರ ನೇತೃತ್ವದಲ್ಲಿ ಉಪ ಸಮಿತಿಯನ್ನೂ ರಚಿಸಿರುವುದು ಖಂಡನೀಯ ಎಂದರು.

ಈಗಾಗಲೇ ಬಗರ್‌ಹುಕುಂ ಸಾಗುವಳಿದಾರರು ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಈವರೆಗೆ ಮಂಜೂರಾತಿ ನೀಡಿಲ್ಲ. ಇಂತಹ ಸನ್ನಿವೇಶದಲ್ಲಿ ಇದೇ ಜಾಗಗಳನ್ನು ಸರ್ಕಾರಿ ಜಾಗವೆಂದು ಪರಿಗಣಿಸಿ ಬೃಹತ್ ಉದ್ದಿಮೆಗಳಿಗೆ ನೀಡಿದರೆ ಬಡ ಸಾಗುವಳಿದಾರರು ಬೀದಿಪಾಲಾಗಲಿದ್ದಾರೆ. ಇದು ಮುಂದಿನ ದಿನಗಳಲ್ಲಿ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಲಿದೆ ಎಂದರು.

ಕಳೆದ ಅನೇಕ ದಶಕಗಳಿಂದ ನಿವೇಶನಕ್ಕಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಸರ್ಕಾರಗಳು ನಿವೇಶನ ರಹಿತರಿಗೆ ಭೂಮಿ ನೀಡಿಲ್ಲ. ಗ್ರಾ.ಪಂ.ಗಳು ನಿವೇಶನ ಮಂಜೂರಾತಿ ಕೋರಿ ಮನವಿ ಸಲ್ಲಿಸಿದ್ದರೂ ಪರಿಭಾವಿತ ಅರಣ್ಯ ಎಂಬ ಕಾರಣ ನೀಡಿ ಕಾಲಹರಣ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಮಧ್ಯೆ ಕಸ್ತೂರಿ ರಂಗನ್ ವರದಿ ಜಾರಿಯ ಆತಂಕವೂ ಎದುರಾಗಿದ್ದು, ಒಂದು ವೇಳೆ ಇದು ಜಾರಿಗೆ ಬಂದರೆ ಸಾವಿರಾರು ಮಂದಿ ಇರುವ ನೆಲೆಯನ್ನೂ ಕಳೆದುಕೊಳ್ಳಲಿದ್ದಾರೆ. ಅವರುಗಳಿಗೆ ಪುನರ್‌ವಸತಿ ಕಲ್ಪಿಸಲು ಜಾಗದ ಕೊರತೆ ಎದುರಾಗಲಿದೆ. ಈ ಹಿನ್ನೆಲೆ ಉದ್ದೇಶಿತ ಭೂ ಪರಭಾರೆ ಯೋಜನೆಯನ್ನು ತಕ್ಷಣ ಕೈಬಿಟ್ಟು, ನಿವೇಶನ ರಹಿತರಿಗೆ ನಿವೇಶನ ನೀಡಲು ಕ್ರಮಕೈಗೊಳ್ಳಬೇಕೆಂದು ಸೋಮಪ್ಪ ಒತ್ತಾಯಿಸಿದರು.

ಈ ಸಂಬAಧಿತ ಮನವಿಯನ್ನು ತಹಶೀಲ್ದಾರ್ ಗೋವಿಂದರಾಜು ಅವರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಅಣ್ಣಪ್ಪ, ಉಪಾಧ್ಯಕ್ಷ ಕುಮಾರ್, ಕಾರ್ಯದರ್ಶಿ ಶಭಾನ, ಉಪ ಕಾರ್ಯದರ್ಶಿ ಸುರೇಶ್, ಕಾರ್ಯಕರ್ತರಾದ ಸರೋಜ, ಕೃಷ್ಣ, ವೆಂಕಪ್ಪ, ರಮೇಶ್, ಪ್ರವೀಣ್, ಶಂಕರ್, ಸೋಮ ಸೇರಿದಂತೆ ಇತರರು ಭಾಗವಹಿಸಿದ್ದರು.