ಮಡಿಕೇರಿ, ಫೆ. ೧೮: ನಗರದ ಸರಕಾರಿ ಪ್ರೌಢಶಾಲೆಯಲ್ಲಿ ತಾರೆ ಜಮೀನ್‌ಫರ್ ಸಂಸ್ಥೆಯ ವತಿಯಿಂದ ೭ ರಿಂದ ೧೦ನೇ ತರಗತಿ ಮಕ್ಕಳಿಗೆ ವಿಜ್ಞಾನ ಕಿಟ್ ಮತ್ತು ತಾರಾಲಯ ಪ್ರದರ್ಶನ ಕಾರ್ಯಕ್ರಮವು ಜರುಗಿತು.
ತಾರೆ ಜಮೀನ್‌ಫರ್ ಸಂಸ್ಥೆಯ ಸಿಇಒ ದಿನೇಶ ಬಾಡಗಂಡಿ ಮಾತನಾಡಿ, ಮಕ್ಕಳಲ್ಲಿ ಗುರಿ ಇರಬೇಕು. ಗುರಿ ತಲುಪಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ತಾರೆ ಜಮೀನ್‌ಫರ್ ಎಂದರೆ ಹಿಂದಿಯಲ್ಲಿ ನಕ್ಷತ್ರಗಳು ಭೂಮಿಯ ಮೇಲೆ ಎಂಬ ಅರ್ಥವಿದೆ. ಹಳ್ಳಿಯ ಮಕ್ಕಳಿಗೆ ತಾರೆ- ನಕ್ಷತ್ರ ತೋರಿಸುವ ಪ್ರಯತ್ನ ಮಾಡುವುದು ಇದರ ಗುರಿಯಾಗಿದೆ. ಹಳ್ಳಿಯ ಮಕ್ಕಳೇ ಮುಂದೆ ದೇಶದ ತಾರೆಗಳಾಗಬೇಕು. ಸರ್ಕಾರಿ ಶಾಲೆಯಲ್ಲಿ ಓದಿದವರು ಹಲವು ಸಾಧನೆ ಮಾಡಿದ್ದಾರೆ. ಹಳ್ಳಿಯ ಮಕ್ಕಳಲ್ಲಿ ಹಲವಾರು ಪ್ರತಿಭೆಗಳಿವೆ. ಹಳ್ಳಿಯಿಂದ ಬಂದವರು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಆ ದೃಷ್ಟಿಯಿಂದ ೭ ರಿಂದ ೧೦ನೇ ತರಗತಿ ಮಕ್ಕಳಿಗೆ ಪಠ್ಯದಲ್ಲಿರುವ ಪ್ರಯೋಗಗಳನ್ನು ಅವರೇ ಮಾಡಿ ಕಲಿಯುವಂತಹ ವಿಜ್ಞಾನ ಕಿಟ್‌ಗಳನ್ನು ನೀಡಲಾಗುತ್ತಿದೆ ಎಂದರು.
ಮುಖ್ಯ ಅತಿಥಿಗಳಾದ ನಿವೃತ್ತ ಕರ್ನಲ್ ಬಿ.ವಿ.ಜಿ. ಕುಮಾರ್ ಮಾತನಾಡಿ, ಮಕ್ಕಳು ವಿದ್ಯಾವಂತರಾಗಿ ಬುದ್ಧಿವಂತರಾಗ ಬೇಕು, ದೊಡ್ಡ ಮಟ್ಟಕ್ಕೆ ಬೆಳೆಯಬೇಕು. ಈ ರೀತಿಯ ಸಣ್ಣ ಕಾರ್ಯಕ್ರಮಗಳು ಪ್ರಸ್ತುತ ದಿನದಲ್ಲಿ ಆನ್‌ಲೈನ್‌ನಲ್ಲಿ ಸಿಗುತ್ತದೆ. ಎರಡು ವರ್ಷದಿಂದ ಆನ್‌ಲೈನ್ ತರಗತಿಗಳು ನಡೆಯುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಕಲಿಕೆಯಲ್ಲಿ ಪರಿಣಿತರಾಗಿದ್ದಾರೆ. ಆನ್‌ಲೈನ್‌ನಲ್ಲಿ ಈ ರೀತಿಯ ಕಾರ್ಯಕ್ರಮ ನೋಡಿ ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು.
ದೊಡ್ಡ ಹೆಜ್ಜೆಗಳನ್ನಟ್ಟು ಉನ್ನತ ಹುದ್ದೆಗಳನ್ನು ಪಡೆದು ಭಾರತ ದೇಶದ ಉತ್ತಮ ಪ್ರಜೆಗಳಾಗಬೇಕು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಶಾಲೆಯ ವಿಜ್ಞಾನ ಶಿಕ್ಷಕಿ ನೀತು ಮಾತನಾಡಿ, ಬಹಳಷ್ಟು ವರ್ಷಗಳಿಂದ ವಿಜ್ಞಾನ ಮತ್ತು ಗಣಿತ ವಿಚಾರದಲ್ಲಿ ವಿದ್ಯಾರ್ಥಿಗಳು ಬಹಳ ಆಸಕ್ತಿ ವಹಿಸಿ, ಕಲಿಯಬೇಕು. ಈ ವಿಷಯಗಳನ್ನು ಕಬ್ಬಿಣ ಕಡಲೆ ಎಂದು ಭಾವಿಸಬಾರದು ಎಂದು ಅವರು ನುಡಿದರು.
ತಾರೆ ಜಮೀನ್‌ಫರ್ ಸಂಸ್ಥೆ ವತಿಯಿಂದ ವಿಜ್ಞಾನದ ಸಣ್ಣ ಸಣ್ಣ ಪ್ರಯೋಗಗಳು ಮತ್ತು ಕೆಲವೊಂದು ವಿಜ್ಞಾನ ಕಿಟ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಇದರಲ್ಲಿ ನೀಡಲಾದ ಕೆಲವೊಂದು ಪರಿಕರಗಳಿಂದ ಖುದ್ದಾಗಿ ವಿದ್ಯಾರ್ಥಿಗಳೇ ಪ್ರಯೋಗಗಳನ್ನು ಮಾಡಿದಾಗ ಜ್ಞಾನ ಹೆಚ್ಚಾಗುತ್ತದೆ ಮತ್ತು ಕೆಲಕ್ಷಣಗಳ ಕಾಲ ಬೇರೆಡೆಗೆ ಕೊಂಡೊಯ್ಯುತ್ತದೆ. ಇದರಿಂದ ವಿಜ್ಞಾನದ ವಿಚಾರದಲ್ಲಿ ಉತ್ಸುಕರಾಗಲು ಇದು ದಾರಿ ದೀಪವಾಗಿದೆ ಎಂದರು. ಕಾರ್ಯ ಕ್ರಮದಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಕಮಿಷನರ್ ಜಿಮ್ಮಿ ಸೀಕ್ವೆರಾ ಶಾಲಾ ಉಪ ಮುಖ್ಯೋಪಾಧ್ಯಾಯಿನಿ ಸೌಮ್ಯಲತ ಮತ್ತು ಆನ್‌ಲೈನ್ ಮೂಲಕ ಸಂಪನ್ಮೂಲ ವ್ಯಕ್ತಿಯಾಗಿ ಗುಲ್ಬರ್ಗದ ನಿವೃತ್ತ ಕುಲಪತಿಗಳಾದ ಪ್ರೊ. ಬಿ.ಜಿ. ಮೂಲಿಮನಿ ಅವರು ಪಾಲ್ಗೊಂಡಿ ದ್ದರು. ಉಷಾ ನಿರೂಪಿಸಿದರು, ನೀತಾ ಕುಮಾರಿ ಸ್ವಾಗತಿಸಿದರು.