ಮಡಿಕೇರಿ, ಫೆ. 17: ಕಾಫಿ ವ್ಯಾಪಾರದ ಸಂದರ್ಭದಲ್ಲಿ ಬೆಳೆಗಾರರೊಬ್ಬರಿಗೆ ವಂಚಿಸಲು ಯತ್ನಿಸಲಾಗಿದೆ ಎಂಬ ಆರೋಪದೊಂದಿಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಟಿ. ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ನೆಮ್ಮಲೆ ಗ್ರಾಮದ ಬೆಳೆಗಾರ ಚೆಟ್ಟಂಗಡ ಕರಣ್ ಎಂಬವರ ಕಾಫಿ ಖರೀದಿಸಲೆಂದು ತೆರಳಿದ್ದವರು ತೂಕದಲ್ಲಿ ಮೋಸ ಮಾಡುತ್ತಿದ್ದರೆನ್ನಲಾಗಿದೆ. ಇದನ್ನು ಸಿಸಿಟಿವಿ ಮೂಲಕ ಪತ್ತೆ ಹಚ್ಚಿದ ಕರಣ್ ತೂಕ ಮಾಡುತ್ತಿದ್ದವರನ್ನು ಪ್ರಶ್ನಿಸಲು ಮುಂದಾದ ಸಂದರ್ಭ ಅವರು ಪಲಾಯನ ಗೈದಿದ್ದಾರೆ. ಅಲ್ಲಿನ ಕಾಫಿ ವ್ಯಾಪಾರಿಯೊಬ್ಬರ ಕೆಲಸದವರು ಇವರೆನ್ನಲಾಗಿದ್ದು, ಈ ಬಗ್ಗೆ ಬೆಳೆಗಾರ ಶ್ರೀಮಂಗಲ ಠಾಣೆಗೆ ಪುಕಾರು ನೀಡಿದ್ದಾರೆ. 50 ಕೆ.ಜಿ.ಯ ಬದಲಾಗಿ ಚೀಲವೊಂದರಲ್ಲಿ ಹೆಚ್ಚಿನ ಕಾಫಿಯನ್ನು ತುಂಬಲಾಗುತ್ತಿತ್ತು ಎಂಬುದಾಗಿ ಹೇಳಲಾಗಿದೆ.