ಸೋಮವಾರಪೇಟೆ, ಫೆ. ೧೮: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಗೇಕೋಡಿ ಗ್ರಾಮ ಸಂಪರ್ಕದ ಪ್ರಮುಖ ರಸ್ತೆ ಕಳೆದ ೨೦ ವರ್ಷಗಳಿಂದ ದುರಸ್ತಿ ಭಾಗ್ಯ ಕಾಣದೇ ಇರುವುದರಿಂದ ಸಂಚಾರ ದುಸ್ತರವಾಗಿದೆ.
ಪ್ರಗತಿಪರ ಕೃಷಿಕರೇ ಹೆಚ್ಚಿರುವ ಈ ಗ್ರಾಮದ ರಸ್ತೆಯನ್ನು ದುರಸ್ತಿ ಪಡಿಸುವಂತೆ ಅನೇಕ ಬಾರಿ ಮನವಿ ಮಾಡಿದ್ದರೂ ಈವರೆಗೆ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ೨೦ ವರ್ಷಗಳ ಹಿಂದೆ ಈ ರಸ್ತೆ ಡಾಮರೀಕರಣವಾಗಿದ್ದು, ಇಲ್ಲಿಯ ತನಕ ಪೂರ್ಣ ಪ್ರಮಾಣದಲ್ಲಿ ರಸ್ತೆ ಅಭಿವೃದ್ಧಿ ಆಗಿಲ್ಲ. ಎಷ್ಟೇ ಮನವಿ ಮಾಡಿದ್ದರೂ ಜಿ.ಪಂ. ಇಂಜಿನಿಯರಿAಗ್ ವಿಭಾಗ ಮುತುವರ್ಜಿ ವಹಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿಯ ಉದ್ಯೋಗಖಾತ್ರಿ ಯೋಜನೆ ಹಾಗೂ ಶಾಸಕರ ನಿಧಿಯಿಂದ ಕೆಲವು ಕಡೆ ಚಿಕ್ಕಪುಟ್ಟ ಕಾಮಗಾರಿ ನಡೆದಿರುವುದನ್ನು ಹೊರತುಪಡಿಸಿದರೆ, ಉಳಿದಂತೆ ರಸ್ತೆಯ ಸ್ಥಿತಿ ಆ ದೇವರಿಗೇ ಪ್ರೀತಿ ಎಂಬAತಿದೆ.
ಕಳೆದ ಏಳೆಂಟು ವರ್ಷಗಳಿಂದ ರಸ್ತೆಗಾಗಿ ಬೇಡಿಕೆಯಿಟ್ಟಿದ್ದರೂ ರಸ್ತೆ ಕಾಮಗಾರಿಗೆ ಅನುದಾನ ಸಿಕ್ಕಿಲ್ಲ. ರೈತರು ತಾವು ಬೆಳೆದ ಕೃಷಿ ಫಸಲನ್ನು ವಾಹನಗಳಲ್ಲಿ ಸಾಗಿಸಲು ಪರದಾಡಬೇಕಾಗಿದೆ. ಮಳೆಗಾಲದಲ್ಲಂತೂ ರಸ್ತೆಯ ಗುಂಡಿಯೊಳಗೆ ನೀರು ಸಂಗ್ರಹವಾಗುವುದರಿAದ ವಾಹನ ಸಂಚಾರ ಸರ್ಕಸ್ನಂತಾಗುತ್ತದೆ ಎಂದು ಗ್ರಾಮಸ್ಥ ಹೂವಯ್ಯ ಅವರು ವಾಸ್ತವಾಂಶ ವಿವರಿಸಿದ್ದಾರೆ.
ಈ ಭಾಗದಲ್ಲಿ ಕಾಫಿ, ಕಾಳುಮೆಣಸು, ಭತ್ತ ಪ್ರಮುಖ ಬೆಳೆಯಾಗಿದ್ದು, ಕೂಯ್ಲಿನ ಸಂದರ್ಭ ಲಘು ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಗುಂಡಿ ಬಿದ್ದ ರಸ್ತೆಯಲ್ಲಿ ವಾಹನ ಚಾಲಿಸಲು ಹರಸಾಹಸ ಪಡಬೇಕು. ದ್ವಿಚಕ್ರ ವಾಹನ ಚಾಲಕರು ಅನೇಕ ಬಾರಿ ಬಿದ್ದು ಗಾಯಗೊಂಡಿದ್ದಾರೆ.
ಕೂಗೇಕೋಡಿ, ಸಬ್ಬನಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ೮೦ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಬಹುತೇಕ ಬೆಳೆಗಾರರು ವಾಹನಗಳನ್ನು ಖರೀದಿಸಿದ್ದಾರೆ. ಗುಂಡಿಬಿದ್ದ ರಸ್ತೆಯಲ್ಲಿ ವಾಹನ ಓಡಿಸುತ್ತಿರುವುದರಿಂದ, ರಿಪೇರಿಗೆ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಶಾಲಾ ವಾಹನಗಳು ಗ್ರಾಮದೊಳಗೆ ಬರಲು ಹಿಂದೇಟು ಹಾಕುತ್ತಿವೆ. ಹಾಳಾದ ರಸ್ತೆಯಲ್ಲಿ ವಾಹನ ಚಾಲಿಸಲು ಸಾಧ್ಯವಿಲ್ಲ ಎಂದು ಚಾಲಕರು ಹೇಳುತ್ತಿದ್ದಾರೆ. ಗ್ರಾಮದೊಳಗಿನ ಸೇತುವೆ ಶಿಥಿಲಾವಸ್ಥೆ ತಲುಪಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಗ್ರಾಮೀಣ ಭಾಗದ ರಸ್ತೆಗೆ ಸೂಕ್ತ ಅನುದಾನ ಕೊಡದೆ ಸರ್ಕಾರವು ರೈತರನ್ನು ವಂಚಿಸುತ್ತಿದೆ. ಕೂಡಲೇ ಸೂಕ್ತ ಅನುದಾನ ಕಲ್ಪಿಸಿ ರಸ್ತೆ ಡಾಮರೀಕರಣ ಮಾಡಬೇಕು. ಸಬ್ಬನಕೊಪ್ಪ, ಕೂಗೇಕೋಡಿ ರಸ್ತೆ ೨ಕಿ.ಮೀ.ಡಾಮರೀಕರಣವಾಗಬೇಕು. ರಸ್ತೆ ತುಂಬಾ ಹಾಳಾಗಿದೆ. ಕೃಷಿ ಫಸಲು ಸಾಗಾಟಕ್ಕೆ ಸಮಸ್ಯೆಯಾಗಿದೆ. ನರೇಗಾ ಯೋಜನೆಯಲ್ಲಿ ಕೆಲವು ಕಡೆ ಕಾಂಕ್ರಿಟೀಕರಣ ಮಾಡಲಾಗಿದೆ. ಶಾಸಕರ ನಿಧಿಯಿಂದ ಕೆಲ ಭಾಗದಲ್ಲಿ ಡಾಮರೀಕರಣವಾಗಿದೆ. ಆದರೂ ರಸ್ತೆ ಸಮಸ್ಯೆ ಬಗೆಹರಿದಿಲ್ಲ ಎಂದು ಕೂಗೇಕೋಡಿ ನಿವಾಸಿ ಶಿವಣ್ಣಯ್ಯ ತಿಳಿಸಿದ್ದಾರೆ.
ಕೂಗೇಕೋಡಿ ಗ್ರಾಮದ ರಸ್ತೆಗೆ ಮಳೆಹಾನಿ ಪರಿಹಾರ ಯೋಜನೆಯಡಿ ೫ಲಕ್ಷ ರೂ.ಗಳಿಗೆ ಕ್ರಿಯಾಯೋಜನೆ ಮಾಡಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಅವಶ್ಯಕ ಸ್ಥಳದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಸೇತುವೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿ.ಪಂ. ಇಂಜಿನಿಯರಿAಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ವೀರೇಂದ್ರ ತಿಳಿಸಿದ್ದಾರೆ.