ಕೋವರ್‍ಕೊಲ್ಲಿ ಇಂದ್ರೇಶ್

ಮೈಸೂರು, ಫೆ. 17: ಈ ತಿಂಗಳ ಮೊದಲ ವಾರದಲ್ಲಿ ಮಂಡಿಸಲಾದ ಕೇಂದ್ರ ಸರ್ಕಾರದ ಬಜೆಟ್‍ನಲ್ಲಿ ಮೈಸೂರು-ಕುಶಾಲನಗರ ನೂತನ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ರೂ. 1000 ಕೋಟಿ ಅನುದಾನ ನೀಡಲಾಗಿರುವುದು ತಡವಾಗಿ ಬಹಿರಂಗಗೊಂಡಿದೆ. 2022-23ರ ಬಜೆಟ್‍ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೋಜನೆಗೆ ರೂ. 1000 ಕೋಟಿ ಅನುದಾನ ನೀಡಿದ್ದು, ರೈಲ್ವೇ ಸಂಪರ್ಕ ವಂಚಿತ ಏಕೈಕ ಜಿಲ್ಲೆಯಾಗಿದ್ದ ಕೊಡಗಿಗೆ ಸರ್ಕಾರವೊಂದು ಮಾಡುತ್ತಿರುವ ಮೊಟ್ಟ ಮೊದಲ ಸಾವಿರಾರು ಕೋಟಿ ರೂಪಾಯಿಗಳ ಬೃಹತ್ ಯೋಜನೆ ಇದಾಗಿದೆ. ಅನೇಕ ವರ್ಷಗಳಿಂದ ಈ ಯೋಜನೆಯ ಅನುಷ್ಠಾನ ಕಾರ್ಯದ ಕುರಿತು ಕಾರ್ಯ ಯೋಜನೆ ಪ್ರಗತಿಯಲ್ಲಿದ್ದರೂ ಇನ್ನೂ ಕೂಡ ಫೈನಲ್ ಲೊಕೇಷನ್ ಸರ್ವೆ ಆಗಿಲ್ಲ.

ಮೈಸೂರು-ಕುಶಾಲನಗರ ನಡುವಿನ 87.2 ಕಿಲೋಮೀಟರ್ ಉದ್ದದ ರೈಲ್ವೇ ಮಾರ್ಗದ ಅಂತಿಮ ಮಾರ್ಗ ಸಮೀಕ್ಷೆ (ಈiಟಿಚಿಟ ಟoಛಿಚಿಣioಟಿ suಡಿveಥಿ)ಗೆ ಬೆಂಗಳೂರು ಮೂಲದ ಏರಿಯಲ್ ಕನ್ಸ್‍ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಗೆ ಕಳೆದ 2020 ರ ಆಗಸ್ಟ್ ತಿಂಗಳಿನಲ್ಲೇ 1.26 ಕೋಟಿ ರೂಪಾಯಿಗಳಿಗೆ ಟೆಂಡರ್ ನೀಡಲಾಗಿತ್ತು. ಆದರೆ ಮಳೆಯ ಕಾರಣದಿಂದ ಮೂರು ತಿಂಗಳವರೆಗೆ ಸರ್ವೇ ಕಾರ್ಯ ನಡೆಸದ ಕಂಪೆನಿ ಈ ಕೆಲಸ ಆಗುವುದಿಲ್ಲ ಎಂದು ಹೊರ ನಡೆಯಿತು. ನಂತರ ಈ ಟೆಂಡರ್‍ನ್ನು ಹೈದರಾಬಾದ್ ಮೂಲದ ಮಾತ ಕನ್ಸ್‍ಟ್ರಕ್ಷನ್ಸ್ ಮತ್ತು ಬಿಲ್ಡರ್ಸ್ ಲಿಮಿಟೆಡ್ ಎಂಬ ಕಂಪೆನಿ ಪಡೆದುಕೊಂಡಿತ್ತು. ಆದರೆ ಅದೂ ಕೂಡ ಕೆಲಸ ಮಾಡದೇ 2021 ರ ನವೆಂಬರ್‍ನಲ್ಲಿ ನಿರ್ಗಮಿಸಿತ್ತು. ಪುನಃ ಮೂರನೇ ಬಾರಿಗೆ ಟೆಂಡರ್ ಕರೆಯಲಾಗಿದ್ದು ಈ ತಿಂಗಳ ಮೊದಲ ವಾರ ಟೆಂಡರ್ ತೆರೆಯಲಾಗಿದೆ. ಇದರಲ್ಲಿ ಒಟ್ಟು 20 ಕಂಪೆನಿಗಳು ಪಾಲ್ಗೊಂಡಿದ್ದು ಟೆಂಡರ್ ಪರಿಶೀಲನೆಯಲ್ಲಿದೆ. ಇನ್ನು 15 ದಿನಗಳಲ್ಲಿ ಬಿಡ್‍ದಾರ ಕಂಪೆನಿಯನ್ನು ಅಂತಿಮಗೊಳಿಸಲಾಗುವುದು ಎಂದು ಬೆಂಗಳೂರಿನ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಯೊಂದು ಟೆಂಡರ್ ಪ್ರಕ್ರಿಯೆಯಿಂದ ಯೋಜನೆಯ ಅನುಷ್ಠಾನ 6 ತಿಂಗಳು ಮುಂದಕ್ಕೆ ಹೋಗುತ್ತಿದೆ. ರೈಲ್ವೇ ಸೌಲಭ್ಯ ವಂಚಿತ ಏಕೈಕ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಈ ಜಿಲ್ಲೆಯ ರೈಲ್ವೇ ಮಾರ್ಗದ ಬೇಡಿಕೆಗೆ ದಶಕಗಳ ಇತಿಹಾಸವೇ ಇದೆ. ಈ ಯೋಜನೆಯ ಅನುಷ್ಠಾನ ನಿಧಾನವಾದಷ್ಟೂ ವೆಚ್ಚ ಏರುತ್ತಾ ಹೋಗುತ್ತದೆ. ಈ ಫೈನಲ್ ಲೊಕೇಷನ್ ಸರ್ವೆಯ ನಂತರವಷ್ಟೆ ಎಲ್ಲೆಲ್ಲಿ ಮೇಲ್ಸೇತುವೆ, ಸೇತುವೆ, ಕ್ರಾಸಿಂಗ್‍ಗಳು ಬರಲಿವೆ ಎಂದು ತಿಳಿಯಲಿದೆ. ಇದನ್ನು ದೆಹಲಿಯಲ್ಲಿರುವ ರೈಲ್ವೇ ಮಂಡಳಿಗೆ ಸಲ್ಲಿಸಲಾಗುತ್ತದೆ. ನಂತರ ಈ ಯೋಜನೆಯ ಒಟ್ಟು ನಿಖರವಾದ ವೆಚ್ಚವನ್ನು ನಿಗದಿಪಡಿಸಲಾಗುತ್ತದೆ. ಇದಾದ ನಂತರ ರಾಜ್ಯ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಬಜೆಟ್‍ನಲ್ಲಿ ಹಣ ಮೀಸಲಿರಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾಗುತ್ತದೆ. ಮೈಸೂರು-ಕುಶಾಲನಗರ ನೂತನ 87.2 ಕಿ.ಮೀ. ಮಾರ್ಗ ನಿರ್ಮಾಣಕ್ಕೆ ರೂ. 1,854.62 ಕೋಟಿ ವೆಚ್ಚವಾಗಲಿದೆ ಎಂದು 2019ರ ಫೆಬ್ರವರಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಅಂದಾಜಿಸಲಾಗಿತ್ತು. ಪ್ರತಿ ಕಿ.ಮೀ. ಮಾರ್ಗ ನಿರ್ಮಾಣಕ್ಕೆ 21.27 ಕೋಟಿ ವೆಚ್ಚವಾಗಲಿದ್ದು 274.65 ಹೆಕ್ಟೇರ್ ಒಣಭೂಮಿ ಮತ್ತು 275.15 ಹೆಕ್ಟೇರ್ ನೀರಾವರಿ ಜಮೀನು ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಯೋಜನೆಯಲ್ಲಿ 50:50 ಅನುಪಾತದಲ್ಲಿ ವೆಚ್ಚವನ್ನು ಭರಿಸಲಿವೆ. ಫೈನಲ್ ಲೊಕೇಷನರ್ ಸರ್ವೆಯ ವರದಿ ಸಲ್ಲಿಕೆಯ ನಂತರ ದೆಹಲಿಯ ರೈಲ್ವೇ ಮಂಡಳಿಯ ಅನುಮೋದನೆ ನೀಡಲಿದ್ದು ಮೊದಲು ಭೂ ಸ್ವಾಧೀನ ಆರಂಭಗೊಳ್ಳಲಿದೆ. ಈಗಾಗಲೇ ಬಜೆಟ್‍ನಲ್ಲಿ ಹಣ ಮೀಸಲಿರಿಸಿರುವುದರಿಂದ ಯೋಜನೆಯ ಅನುಷ್ಠಾನ ಚುರುಕಾಗಲಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ. ಈ ಯೋಜನೆ ಅನುಷ್ಠಾನದ ನಂತರ ಜಿಲ್ಲೆಯಲ್ಲಿ ಪ್ರವಾಸೋದ್ಯಮದ ಜತೆಗೇ ಕಾಫಿ ಉದ್ಯಮಕ್ಕೂ ಹೆಚ್ಚಿನ ಅನುಕೂಲ ಆಗಲಿದ್ದು ಹೆಚ್ಚಿನ ಉದ್ಯೋಗ ಸೃಷ್ಟಿ ಆಗಲಿದೆ. ಜತೆಗೇ ಜಿಲ್ಲೆಯ ಪ್ರಮುಖ ಕಾಫಿ ಬೆಳೆಯ ಸಾಗಾಟ ವೆಚ್ಚ ಕಡಿಮೆ ಆಗುವ

ಜತೆಗೇ ಮಹಾನಗರಗಳಲ್ಲಿ ನೂತನ ಮಾರುಕಟ್ಟೆ ಸೃಷ್ಟಿಯಾಗಲಿದೆ. ಈಗ ಕಾಫಿ ವಹಿವಾಟು ಮಾಡದೇ, ಬಂದರು ಹೊಂದಿರುವ ಮಹಾನಗರಗಳ ಮೂಲಕವೂ ಕಾಫಿ ವಿದೇಶಕ್ಕೆ ರಫ್ತಾಗಲಿದೆ ಎಂದು ಉದ್ಯಮ ಮೂಲಗಳು ತಿಳಿಸಿವೆ.