ಮಡಿಕೇರಿ, ಫೆ. ೧೭: ನಗರದ ಜಿ.ಟಿ. ರಸ್ತೆಯಲ್ಲಿ ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಕೋಟೆಯಿಂದ ೧೦೦ ಮೀಟರ್ ಅಂತರದೊಳಗೆ ನಿರ್ಮಾಣವಾಗಿದ್ದ ಕಟ್ಟಡವನ್ನು ನಗರಸಭೆ ವತಿಯಿಂದ ಇಂದು ತೆರವುಗೊಳಿಸಲಾಯಿತು.

ಹೆಚ್.ಎಂ. ನಂದಕುಮಾರ್ ಅವರಿಗೆ ಜಿಟಿ ರಸ್ತೆಯಲ್ಲಿ ಸೇರಿದ ಜಾಗವು ಪ್ರಾಚ್ಯವಸ್ತು ಇಲಾಖೆಗೆ ಸೇರಿದ ಕೋಟೆಯಿಂದ ೧೦೦ ಮೀಟರ್ ಅಂತರದೊಳಗಿದ್ದು, ಅಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ನಗರಸಭಾ ಮಾಜಿ ಅಧ್ಯಕ್ಷ ಪಿ.ಡಿ. ಪೊನ್ನಪ್ಪ ಅವರು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.

ಆದರೆ ಇದೀಗ ಅಲ್ಲಿ ಹಲವು ಅಂಗಡಿಗಳು ತೆರೆಯಲ್ಪಟ್ಟಿದ್ದು, ದಾಖಲೆಗಳ ಸಹಿತ ಪೊನ್ನಪ್ಪ ಅವರು ಮತ್ತೆ ರಾಜ್ಯ ಉಚ್ಚ ನ್ಯಾಯಾಲಯದ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಆದೇಶ ನೀಡಿದ ನ್ಯಾಯಾಲಯ, ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸಾಬೀತಾದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಸೂಚಿಸಿತ್ತು. ಈ ಬಗ್ಗೆ ಹಿಂದೆ ಜಿಲ್ಲಾಧಿಕಾರಿಗಳು, ಪ್ರಾಚ್ಯ ವಸ್ತು ಇಲಾಖೆಯ ನಿರ್ದೇಶನವಿಲ್ಲದೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ನಗರಸಭೆಗೆ ಸೂಚಿಸಿದ್ದರೂ, ನಗರಸಭೆ ಈ ಆದೇಶವನ್ನು ಪಾಲಿಸಲಿಲ್ಲವಾದಲ್ಲಿ, ನಗರಸಭೆಯ ವಿರುದ್ಧ ಕಾನೂನು ಕ್ರಮಕೈಗೊಂಡು ಸರಕಾರದ ಗಮನ ಸೆಳೆಯುವಂತೆಯೂ ನ್ಯಾಯಾಲಯ ಆದೇಶಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇಂದು ನಗರಸಭೆ ವತಿಯಿಂದ ಕಟ್ಟಡವನ್ನು ತೆರವು ಮಾಡಲಾಯಿತು.