*ಗೋಣಿಕೊಪ್ಪಲು, ಫೆ. 17: ತಿತಿಮತಿ ಮಜ್ಜಿಗೆ ಹಳ್ಳಫಾರಂ ಕ್ಯಾಂಪ್ ಬಳಿಯ ಪಂಜರಿಯವರ ಸುರೇಶ್ ಎಂಬವರ ಮನೆ ಬುಧವಾರ ರಾತ್ರಿ ವಿದ್ಯುತ್ ಸೋರಿಕೆಯಿಂದಾಗಿ ಬೆಂಕಿಗೆ ಆಹುತಿಯಾಗಿದೆ. ಮನೆಯ ಒಳಗಿದ್ದ ಟಿ.ವಿ, ಮಿಕ್ಸಿ, ಬಟ್ಟೆ, ಹಾಸಿಗೆ, ಮಂಚ, ದವಸ ಧಾನ್ಯ ಮೊದಲಾದ ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ತಿತಿಮತಿ ವಸತಿ ನಿಲಯದಲ್ಲಿ ಅಡುಗೆ ಕೆಲಸದವರಾಗಿರುವ ಸುರೇಶ್ ಅವರು ಬುಧವಾರ ಮಧ್ಯಾಹ್ನ ಕೆಲಸದ ನಿಮಿತ್ತ ಬಾಳೆಲೆ ಬಳಿಯ ನಿಟ್ಟೂರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ವಿದ್ಯುತ್ ಸಂಜೆ ವೇಳೆಯಲ್ಲಿ ಬಂದು ಹೋಗುವುದು ಮಾಡುತ್ತಿತ್ತು ಎಂದು ಪಕ್ಕದ ಮನೆಯವರು ತಿಳಿಸಿದ್ದಾರೆ. ರಾತ್ರಿ ಆಗುವಾಗ ಮನೆಯಿಂದ ಹೊಗೆ ಬರುವುದನ್ನು ನೋಡಿದ್ದಾರೆ. ಮನೆಯ ಬಾಗಿಲು ತೆರೆದು ನೋಡುವಷ್ಟರಲ್ಲಿ ವಸ್ತುಗಳೆಲ್ಲ ಸುಟ್ಟು ಹೋಗಿದ್ದವು ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಂಕರ ಹೇಳಿದರು. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಪಿಡಿಒ ಮಮತಾ, ಸದಸ್ಯರಾದ ಶಂಕರ್ ಅನೂಪ್ ಹಾಗೂ ಐಟಿಡಿಪಿ ಇಲಾಖೆ ನೌಕರರು ಭೇಟಿ ನೀಡಿ ಪರಿಶೀಲಿಸಿದರು,