ಚೆಯ್ಯಂಡಾಣೆ, ಫೆ. ೧೬: ವೀರಾಜಪೇಟೆ-ನಾಪೋಕ್ಲು ಮುಖ್ಯರಸ್ತೆಯ ೪ನೇ ಮೈಲು ರಸ್ತೆಯಲ್ಲಿ ಸೃಷ್ಟಿಯಾಗಿರುವ ಗುಂಡಿ ಅನಾಹುತಕ್ಕೆ ಎಡೆ ಮಾಡಿಕೊಟ್ಟಿದೆ. ಈಗಾಗಲೇ ಹಲವಾರು ಅಪಘಾತಗಳು ಈ ರಸ್ತೆಯಲ್ಲಿ ಸಂಭವಿಸಿದರು ಕೂಡ ಗುಂಡಿ ಮುಚ್ಚಲು ಕ್ರಮಕೈಗೊಳ್ಳದ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಈ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, ಕಾಮಗಾರಿ ಸ್ಥಗಿತಗೊಂಡಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.

ಗುಂಡಿಯ ಪಕ್ಕದಲ್ಲಿ ‘ಜಲ್ಲಿಕಲ್ಲು ಸಿಗದೆ ಇರುವ ಕಾರಣ ಈ ಗುಂಡಿಯನ್ನು ಮುಚ್ಚಿರುವುದಿಲ್ಲ’ ಎಂಬ ನಾಮಫಲಕವನ್ನು ಯಾರೋ ಅಳವಡಿಸಿರುವುದು ನಗೆಪಾಟಲಿಗೆ ಈಡಾಗಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

-ಅಶ್ರಫ್ ಚೆಯ್ಯಂಡಾಣೆ