ಮುಳ್ಳೂರು, ಫೆ. ೧೬: ರೋಟರಿ ಕ್ಲಬ್ ಸಮಾಜ ಸೇವೆಗೆ ಹೆಸರಾದ ಸಂಸ್ಥೆಯಾಗಿದ್ದು ಪ್ರತಿ ರೋಟರಿ ಕ್ಲಬ್‌ಗಳಲ್ಲಿ ಮತ್ತಷ್ಟು ಸದಸ್ಯತ್ವವನ್ನು ಹೆಚ್ಚಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಿರಿ ಎಂದು ರೋಟರಿ ಕ್ಲಬ್ ಕೊಡಗು ಜಿಲ್ಲಾ ರಾಜ್ಯಪಾಲ ರವೀಂದ್ರ ಭಟ್ ಹೇಳಿದರು.

ಸಮೀಪದ ಶನಿವಾರಸಂತೆ ಆರ್.ವಿ. ಕಲ್ಯಾಣ ಮಂಟಪದಲ್ಲಿ ನಡೆದ ಶನಿವಾರಸಂತೆ ರೋಟರಿ ಕ್ಲಬ್ ವಾರ್ಷಿಕ ಸಭೆ ಹಾಗೂ ರೋಟರಿ ಕ್ಲಬ್ ಜಿಲ್ಲಾ ರಾಜ್ಯಪಾಲರ ಭೇಟಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು. ರೋಟರಿ ಕ್ಲಬ್ ಮೂಲಕ, ಸಮಾಜ ಜಾಗೃತಿ, ರಕ್ತದಾನ, ಆರೋಗ್ಯ ತಪಾಸಣೆ ಶಿಬಿರಗಳಂತಹ ಕಾರ್ಯಕ್ರಮಗಳ ಜೊತೆಯಲ್ಲಿ ಹಲವಾರು ಜನಪರ ಕೆಲಸಗಳನ್ನು ಮಾಡುತ್ತಿರುವ ಮೂಲಕ ಸಮಾಜಸೇವೆ ಮಾಡುತ್ತಿದ್ದು ಇದರಿಂದ ರೋಟರಿ ಕ್ಲಬ್ ಸದಸ್ಯರು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಿದ್ದಾರೆ ಎಂದರು.

ಸಹಾಯಕ ರಾಜ್ಯಪಾಲ ಎಚ್.ಟಿ. ಅನಿಲ್ ಮಾತನಾಡಿ, ರೋಟರಿ ಕ್ಲಬ್ ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಮೂಲಕ ಸರಕಾರದ ಜೊತೆ ಕೈಜೋಡಿಸುತ್ತಿದೆ ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಸದಸ್ಯರು ಸಮಾಜವನ್ನು ಅಭಿವೃದ್ಧಿ ಪಡಿಸಲು ನೆರವಾಗುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ್, ವಲಯ ಸೇನಾನಿ ಟಿ.ಆರ್. ಪುರುಷೋತ್ತಮ್ ಮಾತನಾಡಿದರು. ಶನಿವಾರಸಂತೆ ರೋಟರಿ ಕ್ಲಬ್ ಅಧ್ಯಕ್ಷ ಹೆಚ್.ಪಿ. ಮೋಹನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ಎಸ್. ವಸಂತ್ ರೋಟರಿ ಕ್ಲಬ್ ಪದಾಧಿಕಾರಿಗಳು, ಸದಸ್ಯರು, ರೋಟರಿ ಕ್ಲಬ್ ಮಹಿಳಾ ಘಟಕದ ಸದಸ್ಯರು ಪಾಲ್ಗೊಂಡಿದ್ದರು. ಶನಿವಾರಸಂತೆ ರೋಟರಿ ಕ್ಲಬ್ ವಾರ್ಷಿಕ ಕಾರ್ಯಕ್ರಮ ಪ್ರಯುಕ್ತ ರೋಟರಿ ಕ್ಲಬ್ ವತಿಯಿಂದ ಮುಳ್ಳೂರು ಗ್ರಾಮದ ಜಂಕ್ಸನ್‌ನಲ್ಲಿ ನಿರ್ಮಿಸಿದ ಕಾಂಕ್ರಿನ್ ಮಿರಾರ್, ಗೋಪಾಲಪುರ ಜಂಕ್ಷನ್‌ನಲ್ಲಿ ಸ್ವಾಗತ ಫಲಕವನ್ನು ರೋಟರಿ ರಾಜ್ಯಪಾಲ ರವೀಂದ್ರ ಭಟ್ ಮತ್ತು ಪ್ರಮುಖರು ಉದ್ಘಾಟಿಸಿದರು. ರೋಟರಿ ಕ್ಲಬ್ ವತಿಯಿಂದ ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಮಿಕರ ಮತ್ತು ವಾಹನ ಚಾಲಕರ ಸಂಘದ ಸದಸ್ಯರಿಗೆ ಟಿ.ಟಿ. ಚುಚ್ಚುಮದ್ದು ಕೊಡಿಸುವ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.