ಕುಶಾಲನಗರ, ಫೆ. ೧೬: ಕುಶಾಲನಗರದ ನೆಹರು ಬಡಾವಣೆಯ ಶ್ರೀ ಬಲಮುರಿ ಸಿದ್ದಿವಿನಾಯಕ ದೇವಸ್ಥಾನದ ೨೪ನೇ ವಾರ್ಷಿಕೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು.
ಕಲಶ ಸ್ಥಾಪನೆ, ಶುದ್ಧಿ, ಪುಣ್ಯಾಹ, ಗಣಪತಿ ಪೂಜೆ, ನವಗ್ರಹ ಪೂಜೆ, ಭಾನುವಾರ ತೈಲಾಭಿಷೇಕ, ಕಲಶ ಪೂಜೆ, ಕಂಕಣಧಾರಣೆ, ಮಹಾಗಣಪತಿ ಹೋಮ, ಪೂರ್ಣಾಹುತಿ ನಂತರ ಮಧ್ಯಾಹ್ನ ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆ, ಅನ್ನದಾನ ಮಾಡಲಾಯಿತು. ದೇವಾಲಯ ಅರ್ಚಕ ಪ್ರಕಾಶ್ ನೇತೃತ್ವದಲ್ಲಿ ಸುರೇಂದ್ರ ಮತ್ತು ತಂಡದಿAದ ಪೂಜಾ ವಿಧಿ ನೆರವೇರಿಸಿದರು.
ಪೂಜೋತ್ಸವದ ಅಂಗವಾಗಿ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪೂಜೋತ್ಸವ ಸಂದರ್ಭ ಹಿರಿಯ ನಾಗರಿಕರಿಗೆ ದೇವಾಲಯ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ದೇವಾಲಯ ಸಮಿತಿ ಅಧ್ಯಕ್ಷ ಡಿ.ಜೆ. ರೇಣುಕುಮಾರ್, ಗೌರವಾಧ್ಯಕ್ಷ ಯು.ಟಿ. ರಾಮಯ್ಯ, ಉಪಾಧ್ಯಕ್ಷ ಜೆ. ಶಿವರಾಂ, ಕಾರ್ಯದರ್ಶಿ ಎಸ್.ಸಿ. ಗೋವಿಂದರಾಜು, ಖಜಾಂಚಿ ರಾಮಕೃಷ್ಣಾಚಾರ್ ಸೇರಿದಂತೆ ನಿರ್ದೇಶಕರು, ಮತ್ತಿತರರು ಇದ್ದರು.