ಮಡಿಕೇರಿ, ಫೆ. ೧೬: ವಿದ್ಯಾರ್ಥಿಗಳಲ್ಲಿ ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸುವ ಹಾಗೂ ಮೂಲ ವಿಜ್ಞಾನ ವಿಷಯಗಳಲ್ಲಿ ಆಸಕ್ತಿ ಮತ್ತು ಚಿಂತನ ಕೌಶಲ್ಯವನ್ನು ವರ್ಧಿಸಬೇಕೆಂಬ ಉದ್ದೇಶದಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಕಳೆದ ಹಲವು ವರ್ಷಗಳಿಂದ ಆಯೋಜಿಸಲಾಗುತ್ತಿರುವ ರಾಜ್ಯಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಕಾರ್ಯಕ್ರಮ ತಾ. ೧೭ ರಂದು (ಇಂದು) ರಾಜ್ಯಾದ್ಯಂತ ಏಕಕಾಲಕ್ಕೆ ನಡೆಯಲಿದೆ.

ಬೆಳಿಗ್ಗೆ ೧೦ ಗಂಟೆಗೆ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಭಾಂಗಣದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧಿಗಳಿಗೆ ಲಿಖಿತ ಪರೀಕ್ಷೆ (೪೦ ಅಂಕಗಳು) ನಡೆಯಲಿದ್ದು, ನಂತರ ಸ್ಪರ್ಧಿಗಳು ಸ್ವತಃ ರೂಪಿಸಿರುವ ವಿಜ್ಞಾನ ಯೋಜನೆ/ ಮಾದರಿ ಮಂಡನೆಗೆ (೫೦ ಅಂಕಗಳು) ಅವಕಾಶ ಕಲ್ಪಿಸಿ, ನಂತರ ವಿದ್ಯಾರ್ಥಿಗಳಿಗೆ ಸಂದರ್ಶನ (೧೦ ಅಂಕಗಳು) ನಡೆಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು. ಸ್ಪರ್ಧೆಗೆ ಪ್ರೌಢಶಾಲೆಯ ೯ ರಿಂದ ೧೨(ಪಿಯುಸಿ)ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಯುವ ವಿಜ್ಞಾನಿ ಪ್ರಶಸ್ತಿ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಡಿಡಿಪಿಐ ವೇದಮೂರ್ತಿ ತಿಳಿಸಿದ್ದಾರೆ.

ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಪ್ರಥಮ ರೂ. ೫ ಸಾವಿರ ಹಾಗೂ ದ್ವಿತೀಯ ರೂ. ೩ ಸಾವಿರಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುವುದು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಅಭಿನಂದನಾ ಪತ್ರ ನೀಡಲಾಗುವುದು ಹಾಗೂ ರಾಜ್ಯಮಟ್ಟದಲ್ಲಿ ವಿಜೇತಗೊಳ್ಳುವ ಮೊದಲ ೪ ಯುವ ವಿಜ್ಞಾನಿಗಳಿಗೆ ತಲಾ ರೂ. ೧೦ ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದು ಸ್ಪರ್ಧಾ ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಜಿ. ಶ್ರೀಹರ್ಷ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಜ್ಞಾನ ವಿಷಯ ಪರಿವೀಕ್ಷಕÀ ಟಿ.ಜಿ. ಪ್ರೇಮಕುಮಾರ್ (ಮೊ. ೯೪೪೮೫೮೮೩೫೨) ಅವರನ್ನು ಸಂಪರ್ಕಿಸಬಹುದು.