ಕುಶಾಲನಗರ, ಫೆ. ೧೪: ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಾಟ ಮಾಡುತ್ತಿರುವ ಆರೋಪಗಳು ಕೇಳಿಬಂದಿವೆ.

ಪಟ್ಟಣದ ಹೃದಯ ಭಾಗದಲ್ಲಿರುವ ಹಲವೆಡೆ ನಿವೇಶನಗಳನ್ನು ನಿಯಮಬಾಹಿರವಾಗಿ ಮಾರಾಟ ಮಾಡುತ್ತಿದ್ದು ಸರ್ಕಾರದ ಆದಾಯಕ್ಕೆ ವಂಚನೆ ಮಾಡುತ್ತಿದ್ದಾರೆ ಎಂದು ದೂರುಗಳು ಕೇಳಿಬಂದಿವೆ. ಈ ನಡುವೆ ಅನಧಿಕೃತ ಬಡಾವಣೆ ನಿರ್ಮಾಣ ಮಾಡಿ ಜನರಿಗೆ ನಿವೇಶನ ಮಾರಾಟ ಮಾಡುವುದು. ಇದರಿಂದ ಮುಂದಿನ ದಿನಗಳಲ್ಲಿ ನಿವೇಶನ ಪಡೆದ ಜನರು ಸಮಸ್ಯೆಗೆ ಸಿಲುಕಲಿದ್ದಾರೆ ಎಂದು ಕುಶಾಲನಗರ ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾಗಿರುವ ಅಮೃತರಾಜ್ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಕುಶಾಲನಗರ ಹೃದಯಭಾಗದಲ್ಲಿ ರೆವಿನ್ಯೂ ಸರ್ವೆ ನಂಬರ್ ೧೧೫ /೧ ಮತ್ತು ಬೈಚನಹಳ್ಳಿ ರೆವಿನ್ಯೂ ಸರ್ವೆ ನಂಬರ್ ೧೪೫/ಃ ವ್ಯಾಪ್ತಿಯ ಪ್ರದೇಶದಲ್ಲಿ ಅನಧಿಕೃತ ಬಡಾವಣೆ ಕಾನೂನುಬಾಹಿರವಾಗಿ ನಿರ್ಮಿಸಿದ್ದು, ಭೂ ಪರಿವರ್ತನೆ ದಾಖಲೆಯಲ್ಲಿ ಅನಧಿಕೃತವಾಗಿ ವಾಣಿಜ್ಯ ಭೂ ಪರಿವರ್ತನೆ ಎಂಬುದಾಗಿ ನಮೂದಿಸಿದ್ದು, ನಕಲಿ ದಾಖಲೆಗಳನ್ನು ಸೃಷ್ಟಿಸಿರುವುದು ಗಮನಕ್ಕೆ ಬಂದಿದೆ ಎಂದು ಅಮೃತರಾಜ್ ಹೇಳಿದ್ದಾರೆ. ಸುಮಾರು ೨೨೫ ಸೆಂಟ್ ಸ್ಥಳದಲ್ಲಿ ೯೫ ಸೆಂಟ್ ಜಾಗ ಸರ್ಕಾರಕ್ಕೆ ಸಾರ್ವಜನಿಕ ಬಳಕೆಗೆ ಬಿಡಬೇಕಾಗಿದೆ. ಇದರ ಬೆಲೆ ಸುಮಾರು ೧೦ ಕೋಟಿ ಆಗಿದ್ದು, ಸ್ಥಳೀಯ ಪಟ್ಟಣ ಪಂಚಾಯಿತಿ ಅಥವಾ ಯೋಜನಾ ಪ್ರಾಧಿಕಾರದಿಂದ ಯಾವುದೇ ರೀತಿ ಅನುಮತಿ ನೀಡಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಕಾರಣದಿಂದ ಈ ಬಡಾವಣೆಯಲ್ಲಿ ನಿವೇಶನ ಪಡೆದವರು ಕಟ್ಟಡ ಕಟ್ಟಲು ಕೂಡ ಸಮಸ್ಯೆ ಉಂಟಾಗಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಪಟ್ಟಣ ಪಂಚಾಯಿತಿ ಮತ್ತು ಯೋಜನಾ ಪ್ರಾಧಿಕಾರ ಅಧಿಕಾರಿಗಳು ಸ್ಥಳದ ಮಾಲೀಕರಿಗೆ ನೋಟೀಸ್ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಈ ಎಲ್ಲಾ ವಿಷಯಗಳ ಬಗ್ಗೆ ರಾಜ್ಯ ಪೌರಾಡಳಿತ ನಿರ್ದೇಶನಾಲಯ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಜಿಲ್ಲಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳಿಗೆ ದೂರು ನೀಡಲಾಗಿದೆ. ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು ಇಲ್ಲವಾದರೆ ಸರ್ಕಾರಕ್ಕೆ ಮತ್ತು ಜನರಿಗೆ ಆಗುವ ವಂಚನೆಯ ಬಗ್ಗೆ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕುಶಾಲನಗರದಲ್ಲಿ ಕೆಲವೆಡೆ ಅನಧಿಕೃತ ಬಡಾವಣೆಗಳು ನಿರ್ಮಾಣವಾಗುತ್ತಿದ್ದು ಇಂತಹ ಬಡಾವಣೆಗಳಲ್ಲಿ ನಿವೇಶನ ಖರೀದಿಸುವ ಸಾರ್ವಜನಿಕರು ಮುಂದಿನ ದಿನಗಳಲ್ಲಿ ಸಂಕಷ್ಟಕ್ಕೆ ಸಿಲುಕುವ ಬದಲಾಗಿ ಸಂಬAಧಿಸಿದ ಇಲಾಖೆಗಳಲ್ಲಿ ಮಾಹಿತಿ ಪಡೆದು ವ್ಯವಹರಿಸಬೇಕೆಂದು ಕೋರಿದ್ದಾರೆ.