ಸೋಮವಾರಪೇಟೆ, ಫೆ.೧೪: ತಾಲೂಕಿನ ಕುಂಬೂರು ಗ್ರಾಮದಲ್ಲಿರುವ ಎಸ್ಟೇಟ್‌ವೊಂದರಲ್ಲಿ ನಿನ್ನೆ ರಾತ್ರಿ ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಈರ್ವರು ಅಸ್ಸಾಂ ಕಾರ್ಮಿಕರನ್ನು ಸೋಮವಾರ ಪೇಟೆ ಪೊಲೀಸರು ಬಂಧಿಸಿದ್ದು, ಮೊಕದ್ದಮೆ ದಾಖಲಿಸಿದ್ದಾರೆ.

ಎಸ್ಟೇಟ್‌ನಲ್ಲಿ ಕಾರ್ಮಿಕರಾಗಿರುವ ಅಸ್ಸಾಂ ಮೂಲದ ಸದ್ದಾಂ ಹಾಗೂ ರಜಾಕ್ ಅವರುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು, ಮೊಕದ್ದಮೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಎಸ್ಟೇಟ್‌ನ ಲೈನ್‌ಮನೆಯಲ್ಲಿ ಹೆಚ್ಚಿನ ಅಸ್ಸಾಮಿಗರು ವಾಸಿಸುತ್ತಿದ್ದು, ನಿನ್ನೆ ರಾತ್ರಿ ೯ ಗಂಟೆಯ ಸುಮಾರಿಗೆ ಗೋ ಮಾಂಸವನ್ನು ಗೋಣಿ ಚೀಲದಲ್ಲಿ ತುಂಬಿಸಿಕೊAಡು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭ, ಸ್ಥಳೀಯರ ನೆರವಿನಿಂದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪತ್ತೆಹಚ್ಚಿದ್ದು, ಮಾಂಸ ಸಹಿತ ಈರ್ವರು ಆರೋಪಿಗಳನ್ನು ಹಿಡಿದು ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ಸ್ಥಳದಲ್ಲಿದ್ದ ಐದಾರು ಅಸ್ಸಾಮಿ ಕಾರ್ಮಿಕರು ತೋಟದೊಳಗೆ ಓಡಿ ತಪ್ಪಿಸಿ ಕೊಂಡಿದ್ದಾರೆ. ಈ ಬಗ್ಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಸೋಮವಾರ ಪೇಟೆ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಈರ್ವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣದ ತನಿಖೆ ಮುಂದುವರೆಸಿ ದ್ದಾರೆ.

ಜಿಲ್ಲೆಯಲ್ಲಿ ನಿರಂತರವಾಗಿ ಗೋ ಹತ್ಯೆ, ಅಕ್ರಮ ಗೋ ಸಾಗಾಟ, ಮಾಂಸ ಮಾರಾಟ ಪ್ರಕರಣಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಇವುಗಳನ್ನು ಮಟ್ಟಹಾಕುವಲ್ಲಿ ವಿಫಲವಾಗಿದೆ. ಈ ಮಧ್ಯೆ ಅಸ್ಸಾಮಿ ಕಾರ್ಮಿಕರು ನುಸುಳಿಕೊಂಡಿದ್ದು, ಎಸ್ಟೇಟ್‌ಗೆ ಬರುವ ಗೋವುಗಳನ್ನು ನಿರಂತರವಾಗಿ ಹತ್ಯೆ ಮಾಡಿ ಮಾಂಸ ಮಾರಾಟ ಮಾಡುತ್ತಿದ್ದಾರೆ. ಇವರುಗಳಿಂದಾಗಿ ಅಕ್ರಮಗಳು ಹೆಚ್ಚುತ್ತಿವೆ. ಕಳೆದ ಎರಡೂವರೆ ತಿಂಗಳ ಹಿಂದಷ್ಟೇ ಇದೇ ಎಸ್ಟೇಟ್‌ನ ರೈಟರ್ ಮೇಲೆ ಅಸ್ಸಾಮಿಗರು ಮಾರಣಾಂತಿಕ ಹಲ್ಲೆಯನ್ನೂ ನಡೆಸಿದ್ದರು. ಇಂತಹ ಅಕ್ರಮಗಳಲ್ಲಿ ಭಾಗಿಯಾಗುವ ಅಸ್ಸಾಮಿಗರ ವಿರುದ್ಧ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಾಗರಣಾ ವೇದಿಕೆ ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಗೋಮಾಂಸ ಸಹಿತ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿರುವ ಜಾಗರಣಾ ವೇದಿಕೆಯ ತಾಲೂಕು ಅಧ್ಯಕ್ಷ ಸುನಿಲ್ ಮಾದಾಪುರ, ಕಾರ್ಯದರ್ಶಿ ವಿನು, ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಉಮೇಶ್, ಕಾರ್ಯಕರ್ತರಾದ ಪ್ರಭು, ಗಿರೀಶ್, ದೀಪಕ್ ಸೇರಿದಂತೆ ಇತರರು, ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳು ನಡೆಯದಂತೆ ಇಲಾಖೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.