ಮಡಿಕೇರಿ, ಫೆ. ೧೫: ಪ್ರಕರಣ ನ್ಯಾಯಾಲಯದಲ್ಲಿದ್ದರೂ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆಯೆಂದು ಮಾಜಿ ನಗರಸಭಾ ಅಧ್ಯಕ್ಷರೊಬ್ಬರು ಮತ್ತೊಬ್ಬ ಮಾಜಿ ನಗರಸಭಾ ಅಧ್ಯಕ್ಷರ ವಿರುದ್ಧ ನ್ಯಾಯಾಲಯದ ಗಮನ ಸೆಳೆದಿದ್ದಾರೆ.

ಹೆಚ್.ಎಂ. ನಂದಕುಮಾರ್ ಅವರಿಗೆ ಜಿಟಿ ರಸ್ತೆಯಲ್ಲಿ ಸೇರಿದ ಜಾಗವು ಪ್ರಾಚ್ಯ ವಸ್ತು ಇಲಾಖೆಗೆ ಸೇರಿದ ಕೋಟೆಯಿಂದ ೧೦೦ ಮೀಟರ್ ಅಂತರದೊಳಗಿದ್ದು, ಅಲ್ಲಿ ಯಾವುದೇ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಪಿ.ಡಿ. ಪೊನ್ನಪ್ಪ ಅವರು ಈ ಹಿಂದೆ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು.

ಆದರೆ ಇದೀಗ ಅಲ್ಲಿ ಹಲವು ಅಂಗಡಿಗಳು ತೆರೆಯಲ್ಪಟ್ಟಿದ್ದು, ದಾಖಲೆಗಳ ಸಹಿತ ಪೊನ್ನಪ್ಪ ಅವರು ಮತ್ತೆ ರಾಜ್ಯ ಉಚ್ಚ ನ್ಯಾಯಾಲಯದ ಗಮನಕ್ಕೆ ತಂದರು. ಈ ಬಗ್ಗೆ ಆದೇಶ ನೀಡಿರುವ ನ್ಯಾಯಾಲಯ, ಕಟ್ಟಡಗಳನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಸಾಬೀತಾದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಈ ಬಗ್ಗೆ ಹಿಂದೆ ಜಿಲ್ಲಾಧಿಕಾರಿಗಳು, ಪ್ರಾಚ್ಯ ವಸ್ತು ಇಲಾಖೆಯ ನಿರ್ದೇಶನವಿಲ್ಲದೆ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ನಗರಸಭೆಗೆ ಸೂಚಿಸಿದ್ದರೂ, ನಗರಸಭೆ ಈ ಆದೇಶವನ್ನು ಪಾಲಿಸಲಿಲ್ಲವಾದಲ್ಲಿ, ನಗರಸಭೆಯ ವಿರುದ್ಧ ಕಾನೂನು ಕ್ರಮಕೈಗೊಂಡು ಸರಕಾರದ ಗಮನ ಸೆಳೆಯುವಂತೆಯೂ ನ್ಯಾಯಾಲಯ ಸೂಚಿಸಿದೆ.