ಚೆಟ್ಟಳ್ಳಿ, ಫೆ. 13: 2018ರಲ್ಲಿ ನಡೆದ ಪ್ರಕೃತಿ ವಿಕೋಪದಿಂದಾದ ಜಲಪ್ರಳಯದಲ್ಲಿ ನೂತನವಾಗಿ ನಿರ್ಮಿಸಿದ ರೂ. 40ಲಕ್ಷದ ಮನೆಮಠವೆಲ್ಲ ನಾಶವಾಗಿದ್ದು, ಮನೆಸಾಲ ಮರು ಪಾವತಿಸಲಾಗದೇ ಸಾಲ ಮನ್ನಾ ಮಾಡಿಕೊಡಬೇಕೆಂದು ಮಾಜಿ ಯೋಧ ಜಗ್ಗಾರಂಡ ಪಿ. ದೇವಯ್ಯ ಬ್ಯಾಂಕಿಗೆ ಮನವಿ ಮಾಡಿದ್ದಾರೆ.

ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪ ಹೋಬಳಿಯ ಇಗ್ಗೋಡು ಗ್ರಾಮದ ಸರ್ವೆ ನಂ. 36/2,63,36/1,65/1 ಹಾಗೂ 65/2 ಹಾಗೂ 64ರಲ್ಲಿ ಮಾಜಿ ಯೋಧ ದೇವಯ್ಯನವರು ಒಟ್ಟು 7ಎಕರೆ ಜಾಗದಲ್ಲಿ ಕಾಫಿತೋಟ ಹಾಗೂ ಕರಿಮೆಣಸು ಬೆಳೆಯನ್ನು ಬೆಳೆದು ಜೀವನ ಸಾಗಿಸುತ್ತಿದ್ದರು. ಸೇನಾ ನಿವೃತ್ತಿ ಹಣ, ತೋಟದ ಆದಾಯ ಹಾಗೂ ಬ್ಯಾಂಕು ಸಾಲ ಒಟ್ಟು ಸೇರಿ ತೋಟದಲ್ಲಿ ರೂ. 40 ಲಕ್ಷದ ಮನೆ ನಿರ್ಮಿಸಿ, ಪೀಠೋಪಕರಣ, ಕೃಷಿ ಉಪಕರಣವನ್ನು ಖರೀದಿಸಿದ್ದರು.

2018 ಆಗಸ್ಟ್ 16 ರ ನಡುರಾತ್ರಿ ಕೊಡಗಿನಲ್ಲಿ ಆದ ಪ್ರಕೃತಿ ವಿಕೋಪಕ್ಕೆ 1.5 ಕಿ.ಮೀ ದೂರದಲ್ಲಿದ್ದ ಬೆಟ್ಟ ಕುಸಿದು ಬಿದ್ದ ಪರಿಣಾಮ ದೇವಯ್ಯ ಅವರ ನೂತನವಾಗಿ ನಿರ್ಮಿಸಿದ ಮನೆ, ಪೀಠೋಪಕರಣ, ಚಿನ್ನಾಭರಣ, ಗದ್ದೆ, ತೋಟ, ಕೃಷಿಬಳಕೆಯ ವಸ್ತುಗಳು ಸೇರಿ 2 ಕೋಟಿ ಬೆಲೆಯ ಆಸ್ತಿಪಾಸ್ತಿ ನಷ್ಟ ಉಂಟಾಗಿ 17 ವರ್ಷ ದೇಶರಕ್ಷಣೆಯಲ್ಲಿ ತೊಡಗಿ ನಿವೃತ್ತನಾದ ಮಾಜಿ ಯೋಧನ ಕುಟುಂಬ ಅತ್ತ ಪಿತ್ರಾರ್ಜಿತ ಆಸ್ತಿಯೂ ಇಲ್ಲ ಇತ್ತ ಸೂರಿಲ್ಲದೆ ಅಲೆಯುವಂತ ಪರಿಸ್ಥಿತಿಯಾಗಿತ್ತು.

ಆಸ್ತಿಪಾಸ್ತಿ ಕಳೆದುಕೊಂಡಿರುವುದರಿಂದ 7ನೇ ಹೊಸಕೋಟೆ ಗ್ರಾಮದ ಸರ್ವೆ ನಂ.124 ಹಾಗೂ 126 ರಲ್ಲಿರುವ ಸರಕಾರಿ ಜಾಗವನ್ನು ನಿವೃತ್ತ ತಮಗೆ ಆರ್ಮಿಗ್ರಾಂಟ್ ಮಾಡಿಕೊಡಬೇಕೆಂದು ದೇವಯ್ಯ ಅವರು ಜಿಲ್ಲಾಧಿಕಾರಿಗಳಿಗೆ, ಸೈನಿಕ ಕಲ್ಯಾಣ ಇಲಾಖೆಗೆ, ಸೈನಿಕವೆಲ್ಫೇರ್ ಮತ್ತು ಪುನರ್ ವಸತಿ ಬೋರ್ಡ್, ಮಾಜಿ ಯೋಧರ ಸಂಘಕ್ಕೆ, ಸೋಮವಾರಪೇಟೆ ತಾಲೂಕು ತಹಶೀಲ್ದಾರರಿಗೆ ದಾಖಲೆ ಸಹಿತ ಮನವಿ ಸಲ್ಲಿಸಿದರು. ಸರಕಾರದ ವತಿಯಿಂದ ವಾಸದ ಮನೆ, ಕೃಷಿಗೆ ಜಾಗ, ಕೃಷಿಸಾಲ ಮನ್ನಾ ಹಾಗೂ ಮನೆಸಾಲವನ್ನು ಮನ್ನಾ ಮಾಡಿಕೊಡಿ ಎಂದು ಮುಖ್ಯಮಂತ್ರಿಗೆ, ಶಾಸಕರಿಗೆ, ಸಂಸದರಿಗೆ, ಜಿಲ್ಲಾಧಿüಕಾರಿಗಳಿಂದ ಹಿಡಿದು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮಾಜಿಯೋಧನ ಮನವಿಗೆ ಸ್ಪಂದನ ದೊರಕಿದ್ದು, ಜಂಬೂರು ಬಾಣೆಯಲ್ಲಿ (ಜನರಲ್ ಕೆ.ಎಂ.ಕಾರ್ಯಪ್ಪ ಲೇಔಟ್) ಸರಕಾರ ನೂತನವಾಗಿ ನಿರ್ಮಿಸಿದ ಆಶ್ರಯಮನೆ ಹಾಗೂ ಮನೆಯ ನಷ್ಟಕ್ಕೆ ಒಂದು ಲಕ್ಷ ಪರಿಹಾರ ಲಭಿಸಿತು.

ಮನೆಕಳೆದುಕೊಂಡರೂ ಮನೆ ಸಾಲ ಪಾವತಿಸಲೇಬೇಕಾದ ಪರಿಸ್ಥಿತಿ

ದೇವಯ್ಯ ಅವರು ಸೇನೆಯಿಂದ ನಿವೃತ್ತಿಯ ನಂತರ ಸಿಂಡಿಕೇಟ್ ಬ್ಯಾಂಕಿನಲ್ಲಿ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ಮಾದಾಪುರ ಸಿಂಡಿಕೇಟ್ ಬ್ಯಾಂಕ್(ಈಗಿನ ಕೆನರಾ ಬ್ಯಾಂಕ್)ಗೆ ವರ್ಗಾವಣೆಗೊಂಡು ಅದೇ ಬ್ಯಾಂಕಿನಲ್ಲಿ ಮನೆ ನಿರ್ಮಾಣಕ್ಕೆ ಹಂತಹಂತವಾಗಿ ಒಟ್ಟು 9 ಲಕ್ಷ ಸಾಲಪಡೆಯಲಾಗಿ ಪಿಂಚಣಿ ಹಣದಲ್ಲೇ ತೀರಿಸುತ್ತಿದ್ದರು. ಅತಿವೃಷ್ಟಿಯಿಂದ ಮನೆಮಠವೆಲ್ಲ ನಷ್ಟಹೊಂದಿದ ಸಮಯದಲ್ಲಿ 5.50ಲಕ್ಷ ಮನೆ ಸಾಲ ಇದ್ದು ವಿಮೆಯ ಹಣ ಕಡಿತಗೊಂಡು 3.50 ಲಕ್ಷ ಪಾವತಿಸಲು ಬಾಕಿಯಿದೆ. ಉಳಿದ ಸಾಲದ ಹಣ ಮನ್ನಾ ಮಾಡುವಂತೆ ಬ್ಯಾಂಕಿನ ಮೇಲಿನ ಕಚೇರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಮಾಜಿಯೋಧನ ಪಿಂಚಣಯಲ್ಲೇ ಸಾಲ ಕಡಿತಗೊಳ್ಳುತ್ತಿರುವುದರಿಂದ ಉಳಿದ ಹಣದಲ್ಲಿ ಜೀವನ ಸಾಗಿಸಲು ಹಾಗು ನಷ್ಟಹೊಂದಿದ ತೋಟದ ಅಭಿವೃದ್ಧಿಗೆ ಕಷ್ಟವಾಗುತ್ತಿದೆ. ಅಸಲು ಬಡ್ಡಿಸೇರಿ ಉಳಿದ 2 ಲಕ್ಷ ಸಾಲವನ್ನು ಮನ್ನಾ ಮಾಡಿಕೊಡಬೇಕೆಂದು ಬ್ಯಾಂಕಿಗೆ ಅಲೆಯುತ್ತಿದ್ದಾರೆ.

ಮನೆಗೆ ವಿಮೆ ಮಾಡದ್ದದು ಯಾರ ತಪ್ಪು?

ಮನೆಸಾಲ ನೀಡುವಾಗ ಪ್ರತಿಯೊಂದು ಬ್ಯಾಂಕಿನಲ್ಲೂ ಮನೆಗೆ ದಾಖಲೆಗಳ ಜೊತೆ ವಿಮೆಯನ್ನು ಕಡ್ಡಾಯವಾಗಿ ಮಾಡಿಸಿದ ನಂತರವೇ ಮನೆಸಾಲ ನೀಡಲಾ ಗುತ್ತದೆ. ಆದರೆ ದೇವಯ್ಯ ಅವರು ಹಂತಹಂತವಾಗಿ ಸಿಂಡಿಕೇಟ್ ಬ್ಯಾಂಕಿನಲ್ಲಿ ಸಾಲ ಪಡೆದು ಮನೆ ನಿರ್ಮಿಸಿದರು. ನಂತರದಲ್ಲಿ ಮನೆ ಕಳೆದುಕೊಂಡ ದಾಖಲೆಗಳನ್ನು ಬ್ಯಾಂಕಿಗೆ ನೀಡಿದಾಗ ಮೊದಲೆರಡು ಹಂತದಲ್ಲಿ ನೀಡಿದ ಸಾಲಕ್ಕೆ ಮಾತ್ರ ವಿಮೆ ಮಾಡಲಾಗಿದೆ.

ನಂತರ ಪಡೆದ ಸಾಲಕ್ಕೆ ವಿಮೆ ಮಾಡದ ಕಾರಣ ಸಾಲ ಬಡ್ಡಿ ಪಾವತಿಸಲೇ ಬೇಕೆಂದು ಬ್ಯಾಂಕಿನವರು ತಿಳಿಸಿ ದ್ದಾರೆ. ಮನೆ ಕಳೆದುಕೊಂಡರೂ ಬ್ಯಾಂಕಿನಿಂದ ಮನೆಸಾಲ ಪಾವತಿ ಸಬೇಕಾದ ಪರಿಸ್ಥಿತಿಯಾಗಿದೆ ಎಂದು ದೇವಯ್ಯ ಬೇಸರ ವ್ಯಕ್ತ ಪಡಿಸಿದ್ದಾರೆ. ಒಟ್ಟಾರೆಯಾಗಿ ಜಲ ಪ್ರಳಯಕ್ಕೆ ಸಿಲುಕಿ ಮನೆ ಕಳೆದು ಕೊಂಡ ಮಾಜಿ ಯೋಧನ ಮನೆ ಸಾಲದಿಂದ ವಿಮುಕ್ತಿ ಎಂದು ಎಂಬುದೇ ಯಕ್ಷಪ್ರಶ್ನೆ.?

- ಪುತ್ತರಿರ ಕರುಣ್ ಕಾಳಯ್ಯ