ಮಡಿಕೇರಿ, ಫೆ. 13: ನಗರದ ಗಣಪತಿ ಬೀದಿಗೆ ನೀರು ಸರಬರಾಜು ಪೈಪ್ ಲೈನ್‍ನ್ನು ಅಳವಡಿಸಿಕೊಟ್ಟಿದ್ದ ದಿ. ಕೊಂಗಂಡ ಗಣಪತಿ ಅವರ ಸ್ಮಾರಕ ನಾಮಫಲಕವನ್ನು ಗಣಪತಿ ಬೀದಿ ಮತ್ತು ಮಹದೇವಪೇಟೆ ಜಂಕ್ಷನ್‍ನಲ್ಲಿ ಪುನರ್ ಸ್ಥಾಪಿಸುವಂತೆ ನಗರಸಭಾ ಸದಸ್ಯ ಅಮೀನ್ ಮೋಹಿಸಿನ್ ಒತ್ತಾಯಿಸಿದ್ದಾರೆ.

ನಗರದ ಗಣಪತಿ ಬೀದಿಗೆ ಹಿಂದೆ ಮಡಿಕೇರಿ ಉಪ ವಿಭಾಗಾಧಿಕಾರಿಗಳಾಗಿದ್ದ ದಿ. ಕೊಂಗಂಡ ಗಣಪತಿ ಅವರು ಅವರ ಸ್ವಂತ ಖರ್ಚಿನಿಂದ ಪಂಪಿನಕೆರೆಯ ಕುಡಿಯುವ ನೀರನ್ನು ಈ ಬೀದಿಯ ನಿವಾಸಿಗಳು ಹಾಗೂ ನಗರದ ಇನ್ನಿತರ ಭಾಗದ ನಿವಾಸಿಗಳ ಉಪಯೋಗಕ್ಕೆ ಪೈಪ್‍ಲೈನ್‍ನ್ನು ಅಳವಡಿಸಿದ್ದು, ಅವರ ನೆನಪಿಗಾಗಿ ಈ ಬೀದಿಗೆ ಗಣಪತಿಬೀದಿ ಎಂದು ನಾಮಕರಣ ಮಾಡಲಾಗಿತ್ತು. ಅವರ ನೆನಪಿಗಾಗಿ ಕೊಂಗಂಡ ಗಣಪತಿಯವರ ಸ್ಮಾರಕ ಫಲಕವನ್ನು ಗಣಪತಿ ಬೀದಿಯ ತುದಿ ಭಾಗದಲ್ಲಿ ಅಲ್ಲಿ ಇದ್ದ ನೀರಿನ ಟ್ಯಾಂಕ್‍ನ ಹತ್ತಿರ ಅಳವಡಿಸಲಾಗಿತ್ತು. ಆದರೆ ಇತ್ತೀಚೆಗೆ ಗಣಪತಿ ಬೀದಿ ಅಗಲೀಕರಣ ಮಾಡುವ ಸಂದರ್ಭ ಈ ನಾಮಫಲಕವನ್ನು ತೆರವು ಮಾಡಲಾಗಿದೆ. ನೀರಿನ ಟ್ಯಾಂಕ್‍ನ್ನು ತೆರವುಗೊಳಿಸಿದ ಪಕ್ಕದಲ್ಲಿರುವ ತಿರುವಿನಲ್ಲಿ ರಾಜೇಶ್ ಅವರ ಮನೆಯ ಬದಿಯಲ್ಲಿ ಲಭ್ಯವಿರುವ ನಗರಸಭೆಯ ಖಾಲಿ ಜಾಗದಲ್ಲಿ ನಾಮಫಲಕವನ್ನು ನಿರ್ಮಿಸುವಂತೆ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಪೌರಾಯುಕ್ತ ಎಸ್.ವಿ. ರಾಮ್‍ದಾಸ್ ಅವರಲ್ಲಿ ಮನವಿ ಮಾಡಿದ್ದಾರೆ.