ಸೋಮವಾರಪೇಟೆ, ಫೆ. 12: ಚೆಟ್ಟಳ್ಳಿಯಲ್ಲಿ ನಡೆದ ಗ್ರಾಮ ಸಭೆ ಸಂದರ್ಭ ಜಿ.ಪಂ. ಮಾಜಿ ಸದಸ್ಯೆ ಸುನಿತಾ ಅವರ ಮೇಲೆ ತಾ.ಪಂ. ಮಾಜಿ ಸದಸ್ಯ ಮಣಿ ಉತ್ತಪ್ಪ ಅವರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರ ಕಾಂಗ್ರೆಸ್ ಪಕ್ಷದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಬಿಜೆಪಿ ಪಕ್ಷದ ಮುಖಂಡರಾದ ಮಣಿ ಉತ್ತಪ್ಪ ಅವರು ನಡೆಸಿದ ದೌರ್ಜನ್ಯದ ವಿರುದ್ದ ಬಿಜೆಪಿ ಪಕ್ಷ ಮೌನವಹಿಸಿರುವುದು ಖಂಡನೀಯ ಎಂದು ಕಾಂಗ್ರೆಸ್ ವಕ್ತಾರ ವಿ.ಪಿ. ಶಶಿಧರ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಎಸ್.ಸಿ. ಘಟಕದ ರಾಜ್ಯ ಸಂಚಾಲಕ ಬಿ.ಈ. ಜಯೇಂದ್ರ, ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ. ನಾಗರಾಜು, ಕಾರ್ಯದರ್ಶಿ ಮಹಮ್ಮದ್ ಶಫಿ, ಉಪಾಧ್ಯಕ್ಷ ಜಮೀರ್, ಬ್ಲಾಕ್ ಉಪಾಧ್ಯಕ್ಷ ಮಂಜುನಾಥ್, ಎಸ್‍ಸಿ ಘಟಕದ ಅಧ್ಯಕ್ಷ ಹೆಚ್.ಎ. ರಾಜಪ್ಪ, ಸೇವಾದಳ ಅಧ್ಯಕ್ಷ ಬಸವರಾಜು, ದಿನೇಶ್, ಕೃಷ್ಣಪ್ಪ, ಅಬ್ಬಾಸ್, ಮಂಜುನಾಥ್, ರಘು ಸೇರಿದಂತೆ ಇತರರು ಭಾಗವಹಿಸಿದ್ದರು.