ಚೆಟ್ಟಳ್ಳಿ, ಫೆ. 13: ಕಳೆದ ವರ್ಷ ಕೋವಿಡ್ ಎರಡನೇ ಅಲೆಯಿಂದ ಲಾಕ್‍ಡೌನ್ ಹೇರಿದ ಕಾರಣದಿಂದ, ಅರ್ಧದಲ್ಲೇ ಸ್ಥಗಿತಗೊಂಡಿದ್ದ, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಮಿಲನ್ಸ್ ಫುಟ್ಬಾಲ್ ಕ್ಲಬ್ ಅಮ್ಮತ್ತಿ ಇವರ ಸಹಯೋಗದ ಜಿಲ್ಲಾ ಮಟ್ಟದ ಫುಟ್ಬಾಲ್ ಲೀಗ್ ಪಂದ್ಯಾಟದ ಬಾಕಿ ಉಳಿದಿದ್ದ, ಕ್ವಾರ್ಟರ್ ಫೈನಲ್ ಪಂದ್ಯಗಳು ತಾ. 19 ಹಾಗೂ 20 ರಂದು ಅಮ್ಮತ್ತಿಯ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‍ನ ಮಾಜಿ ಅಧ್ಯಕ್ಷರು ಹಾಗೂ ಮಹಾಪೋಷಕರಾದ ನೆಲ್ಲಮಕ್ಕಡ ಮೋಹನ್ ಅಯ್ಯಪ್ಪ ತಿಳಿಸಿದರು.

ಅಮ್ಮತ್ತಿಯ ಜಿಲ್ಲಾ ಫುಟ್ಟಾಲ್ ಅಸೋಸಿಯೇಷನ್ ಕಚೇರಿಯಲ್ಲಿ ನಡೆದ ಜಿಲ್ಲಾ ಫುಟ್ಬಾಲ್ ಕ್ಲಬ್‍ಗಳ ಸಭೆಯಲ್ಲಿ ಮೋಹನ್ ಅಯ್ಯಪ್ಪ ಮಾತನಾಡಿ, ಈಗಾಗಲೇ ಪಂದ್ಯಾಟಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದ್ದು, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಾಟಗಳು ಬಾಕಿ ಇದೆ. 08 ತಂಡಗಳು ಕ್ವಾರ್ಟರ್ ಫೈನಲ್‍ಗೆ ಅರ್ಹತೆ ಪಡೆದಿವೆ ಎಂದು ಹೇಳಿದರು.

ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಮಾತನಾಡಿ, 2022ರ ಜಿಲ್ಲಾ ಮಟ್ಟದ ಲೀಗ್ ಪಂದ್ಯಾವಳಿಯನ್ನು ಏಪ್ರಿಲ್ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ಹಾಗೂ ತೀರ್ಪುಗಾರ ಸಂಘದ ಅಧ್ಯಕ್ಷರಾದ ನಾಗೇಶ್ ಮಾತನಾಡಿ, ಮುಂದಿನ ಬಾರಿಯ ಲೀಗ್ ಪಂದ್ಯಾವಳಿಗೆ 20 ತಂಡಗಳು ಈಗಾಗಲೇ ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್‍ನಲ್ಲಿ ನೋಂದಣಿ ಮಾಡಿಕೊಂಡಿವೆ. ನಾಲ್ಕು ಗುಂಪುಗಳಿಗೆ 20 ತಂಡಗಳನ್ನು ವಿಂಗಡಿಸಿ, ತಲಾ ಒಂದು ಗುಂಪಿನಲ್ಲಿ 5 ತಂಡಗಳಂತೆ ಪಂದ್ಯಾಟವನ್ನು ಆಯೋಜಿಸಲು ತೀರ್ಮಾನಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ರಾಜ್ಯ ಫುಟ್ಬಾಲ್ ಸಂಸ್ಥೆಯ ಉಪಾಧ್ಯಕ್ಷರಾದ ಜಗದೀಶ್, ಮಿಲನ್ಸ್ ಫುಟ್ಬಾಲ್ ಕ್ಲಬ್ ಪ್ರಮುಖರಾದ ಲಿಜೇಶ್ ಹಾಗೂ ವಿವಿಧ ಕ್ಲಬ್‍ಗಳ ಸದಸ್ಯರು ಹಾಜರಿದ್ದರು.