ಮಡಿಕೇರಿ, ಫೆ. 12: ಮಡಿಕೇರಿಯ ಮಾರುಕಟ್ಟೆ ವ್ಯಾಪ್ತಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ನಗರಸಭೆ ಕ್ರಮಕೈಗೊಂಡಿದೆ. ಕೋಳಿ ಮಾಂಸ ಮಾರುಕಟ್ಟೆ ಹಿಂಭಾಗದಲ್ಲಿ ಪಾಳುಬಿದ್ದಂತಿದ್ದ ಜಾಗವನ್ನು ಸಮತಟ್ಟುಗೊಳಿಸಿ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸುವದಾಗಿ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಭರವಸೆ ನೀಡಿದರು.

ಈ ಕುರಿತಾಗಿ ಸಂಚಾರಿ ಪೊಲೀಸರು ಹಾಗೂ ಕೆಲ ವ್ಯಾಪಾರಸ್ಥರು ಆ ಸಂದರ್ಭದಲ್ಲಿ ಗಮನ ಸೆಳೆದಿದ್ದರು. ಇಂದು ಜೆಸಿಬಿ ಮೂಲಕ ಜಾಗ ಸಮತಟ್ಟುಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷೆ ಅನಿತಾ ಪೂವಯ್ಯ ಅವರು ಮುಂದಿನ ಸಂತೆಯ ವೇಳೆಗೆ ಈ ಕೆಲಸ ಪೂರ್ಣಗೊಳ್ಳಲಿದೆ. ಸಂತೆ ದಿನದಂದು ಈ ಜಾಗದಲ್ಲಿ ಹಲವಷ್ಟು ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಲಭಿಸುವದರಿಂದ ಕಿಷ್ಕಿಂದೆ ಕಡಿಮೆಯಾಗಲಿದೆ. ಈ ಜಾಗವನ್ನು ಮತ್ತೆ ಹಾಳುಗೆಡವದಂತೆ ಗೇಟ್ ಅಳವಡಿಸಿ ಭದ್ರತೆ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಅಧ್ಯಕ್ಷರ ಭೇಟಿ ಸಂದರ್ಭ ನಗರ ಸಂಚಾರಿ ಠಾಣೆಯ ಎಎಸ್‍ಐಗಳಾದ ರಂಗೇಗೌಡ, ಐ.ಪಿ. ನಂದ, ಸಾರ್ವಜನಿಕರಾದ ಉರೇರಾ ಮತ್ತಿತರರು ಹಾಜರಿದ್ದರು.