ಸೋಮವಾರಪೇಟೆ, ಫೆ. 11: ಶನಿವಾರಸಂತೆಯಿಂದ ಸೋಮವಾರಪೇಟೆ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ಬಳಿ ಸ್ಮಾರಕದಂತಿರುವ ಶತಮಾನೋತ್ಸವ ಭವನಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಭೇಟಿ ನೀಡಿ, ಕಟ್ಟಡದ ಪರಿಸ್ಥಿತಿಯನ್ನು ಗಮನಿಸಿ, ಶೀಘ್ರದಲ್ಲೇ ಭವನ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದ್ದಾರೆ.

ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ 100 ವರ್ಷಗಳು ತುಂಬಿದ ಸವಿನೆನಪಿಗೆ ಬೃಹತ್ ಭವನ ನಿರ್ಮಿಸುವ ಯೋಜನೆಯೊಂದು 2007ರಲ್ಲಿ ಸಿದ್ಧಗೊಂಡು, 15 ವರ್ಷ ಕಳೆದರೂ ನಿರೀಕ್ಷಿತ ಪ್ರಗತಿ ಸಾಧ್ಯವಾಗಿರಲಿಲ್ಲ. ಆ ಸಮಯದಲ್ಲಿ ಶಾಸಕರಾಗಿದ್ದ ಬಿ.ಎ. ಜೀವಿಜಯ ಅವರ ನೇತೃತ್ವದಲ್ಲಿ ಆರಂಭವಾದ ಕಾಮಗಾರಿ ನಂತರದ ದಿನಗಳಲ್ಲಿ ಸ್ಥಗಿತಗೊಂಡಿತು.

ಈ ಹಿನ್ನೆಲೆ 1.25 ಕೋಟಿ ವೆಚ್ಚದ ಯೋಜನೆಯೊಂದು ಹಳ್ಳಹಿಡಿಯುವತ್ತ ಸಾಗಿತ್ತು. ಇದೀಗ 14 ವರ್ಷಗಳ ವನವಾಸದಿಂದ ಶತಮಾನೋತ್ಸವ ಭವನ ಹೊರಬರುವ ಲಕ್ಷಣಗಳು ಕಂಡುಬಂದಿದ್ದು, ಶಾಸಕ ಅಪ್ಪಚ್ಚುರಂಜನ್ ಅವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.

ಶಿಥಿಲಾವಸ್ಥೆಯಲ್ಲಿರುವ ಶತಮಾನೋತ್ಸವ ಭವನ ಕಟ್ಟಡಕ್ಕೆ ಭೇಟಿ ನೀಡಿದ ಶಾಸಕ ಅಪ್ಪಚ್ಚುರಂಜನ್ ಅವರು, ಬೃಹತ್ ಪ್ರಮಾಣದ ಯೋಜನೆಯೊಂದು ನೆನೆಗುದಿಗೆ ಬಿದ್ದಿರುವ ಬಗ್ಗೆ ಸಮಿತಿಯ ಪದಾಧಿಕಾರಿಗಳೊಂದಿಗೆ ಕಳವಳ ವ್ಯಕ್ತಪಡಿಸಿದರು.

ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಶಾಸಕರು, ಶತಮಾನೋತ್ಸವ ಭವನವನ್ನು ಮಾಜೀ ಸಚಿವ ಜೀವಿಜಯ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಪೂರ್ಣಗೊಳ್ಳಲಿಲ್ಲ. ಸಮಿತಿಯ ಪ್ರಮುಖರು ಭವನ ಪೂರ್ಣಗೊಳಿಸುವ ಬಗ್ಗೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಜೀವಿಜಯ ಅವರೊಂದಿಗೆ ಸಭೆ ನಡೆಸಿ, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಸದ್ಯದ ಮಟ್ಟಿಗೆ ಭವನವನ್ನು ಸಾರ್ವಜನಿಕ ಉಪಯೋಗಕ್ಕೆ ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಪಿಲ್ಲರ್‍ಗಳನ್ನು ಅಳವಡಿಸಿ ಮೇಲ್ಭಾಗದಲ್ಲಿ ಶೀಟ್ ಅಳವಡಿಸಲಾಗುವುದು. ಅನುದಾನದ ಮೂಲ ನೋಡಿಕೊಂಡು ಹೆಚ್ಚುವರಿ ಕಾಮಗಾರಿ ಕೈಗೊಳ್ಳಲಾಗುವುದು. ಭವನದ ಬಾಗಿಲು, ಕಿಟಕಿಗಳ ಅವ್ಯವಸ್ಥೆ ಸರಿಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಇದಕ್ಕೂ ಮುನ್ನ ಜೂನಿಯರ್ ಕಾಲೇಜಿನಲ್ಲಿ ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಶಾಸಕರು, ಸಮಿತಿಯ ಪ್ರಮುಖರೊಂದಿಗೆ ಚರ್ಚೆ ನಡೆಸಿದರು. ಮಾಜೀ ಸಚಿವ ಬಿ.ಎ. ಜೀವಿಜಯ ಅವರ ಸಲಹೆಯಂತೆಯೆ ಕಾಮಗಾರಿ ಕೈಗೊಳ್ಳುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಸಮಿತಿಗೆ ಕ್ರಿಯಾಶೀಲ ಸದಸ್ಯರನ್ನು ಸೇರಿಸಿಕೊಂಡು ಅನುದಾನ ಕ್ರೋಡೀಕರಣಕ್ಕೆ ಮುಂದಾಗಬೇಕು. ಹೊಸದಾಗಿ ಕ್ರಿಯಾಯೋಜನೆ ತಯಾರಿಸಬೇಕು. ಪಟ್ಟಣ ಪಂಚಾಯಿತಿಯ ಅಧ್ಯಕ್ಷರನ್ನು ಸಮಿತಿಗೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

2007ರಲ್ಲಿ 1.25 ಕೋಟಿ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಇದೀಗ ಯೋಜನಾ ವೆಚ್ಚ ಅಧಿಕವಾಗಲಿದ್ದು, ಭವನದ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಟ 2.50 ಕೋಟಿ ಹಣದ ಅಗತ್ಯವಿದೆ ಎಂದು ಸಮಿತಿ ಪ್ರಮುಖರು ಅಭಿಪ್ರಾಯಿಸಿದರು. ಪಟ್ಟಣ ಪಂಚಾಯಿತಿ ಮೂಲಕ 1 ಕೋಟಿ ಅನುದಾನ ಒದಗಿಸುವ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ರಂಜನ್ ಭರವಸೆ ನೀಡಿದರು.

ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಜೀವಿಜಯ ಅವರನ್ನು ಮುಂದುವರೆಸುವುದು, ಶಾಸಕ ಅಪ್ಪಚ್ಚುರಂಜನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಉಳಿದಂತೆ ಕ್ರಿಯಾಶೀಲ ಸದಸ್ಯರನ್ನು ಸಮಿತಿಗೆ ಸೇರಿಸಿಕೊಂಡು ಭವನ ನಿರ್ಮಾಣಕ್ಕೆ ಮುಂದಡಿಯಿಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಭವನ ನಿರ್ಮಾಣ ಸಮಿತಿಯ ಜೆ.ಸಿ. ಶೇಖರ್, ಸೋಮಶೇಖರ್, ಎ.ಪಿ. ವೀರರಾಜು, ತಿಮ್ಮಶೆಟ್ಟಿ, ಕೆ.ಎನ್. ಶಿವಕುಮಾರ್, ಡಿ.ವಿ. ಸದಾನಂದ್, ಕಾಲೇಜು ಪ್ರಾಂಶುಪಾಲ ಬೆಳ್ಳಿಯಪ್ಪ, ಉಪನ್ಯಾಸಕಿ ತಿಲೋತ್ತಮೆ ಅವರುಗಳು ಭಾಗವಹಿಸಿದ್ದರು.