ಸುಂಟಿಕೊಪ್ಪ,ಫೆ.12: ಹಾಡಹಗಲೆ ಮನೆಗೆ ಅಕ್ರಮ ಪ್ರವೇಶ ಮಾಡಿ ಮನೆಯ ಮಹಿಳೆಯರ ಮೇಲೆ ಹಲ್ಲೆ ನಡೆಸಿ ನಗದು ಚಿನ್ನಾಭರಣ ಅಪಹರಿಸಿ 2 ಪುಟ್ಟ ಹೆಣ್ಣು ಮಕ್ಕಳನ್ನು ಹೊತ್ತೊಯ್ದ ಘಟನೆ ನಡೆದಿದೆ.
ಸುಂಟಿಕೊಪ್ಪ ನಾರ್ಗಾಣೆ ಗ್ರಾಮದ ಗದ್ದೆಹಳ್ಳದ ನಿವಾಸಿ ಎ. ಮೂಸ ಅವರ ಮನೆಗೆ ತಾ. 11 ರಂದು ಮಧ್ಯಾಹ್ನ 12.45 ಗಂಟೆಗೆ ಮೂಸ ಅವರ ಅಳಿಯ ರಫೀಕ್ ಎಂಬಾತ ಮುಸುಕಧಾರಿ ಮಹಿಳೆಯೋರ್ವರೊಂದಿಗೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ ಮೂಸ ಅವರ ಪತ್ನಿ ಫಾತಿಮಾ ಅವರ ಮೇಲೆ ಹಲ್ಲೆ ನಡೆಸಿ ಮನೆಯಲ್ಲಿದ್ದ 25,000 ರೂ ನಗದು 4 ಪವನ್ ಚಿನ್ನವನ್ನು ಅಪಹರಿಸಿ ಇಬ್ಬರು ಪುಟ್ಟ ಮಕ್ಕಳನ್ನು ಬಲಾತ್ಕಾರವಾಗಿ ಎಳೆದೊಯ್ದು ಬಿಳಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೂಸ ದೂರು ಸಲ್ಲಿಸಿದ್ದಾರೆ.
ಮೂಸ ಅವರಿಗೆ 2 ಗಂಡು 1 ಹೆಣ್ಣು ಮಗಳಿದ್ದು ಮಗಳಾದ ರಿಜ್ವಾನ್ ಫಾತಿಮಾ ಅವರನ್ನು ಸುಂಟಿಕೊಪ್ಪ ಮಧುರಮ್ಮ ಬಡಾವಣೆ ನಿವಾಸಿ ರಫೀಕ್‍ಗೆ ಮದುವೆ ಮಾಡಿಕೊಡಲಾಗಿತ್ತು. ರಿಜ್ವಾನ್ ಫಾತಿಮಾ 2 ನೇ ಹೆಣ್ಣುಮಗುವಿಗೆ ಮಡಿಕೇರಿ ಖಾಸಗಿ ಆಸ್ಪತ್ರೆಯಲ್ಲಿ ಜನ್ಮನೀಡಿದ್ದ ಆಕೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಳು.
ನಂತರ ಮೂಸ ಅವರೆ ಎರಡು ಮೊಮ್ಮಕ್ಕಳ ಪೋಷಣೆ ಪಾಲನೆಯನ್ನು ಮಾಡಿಕೊಂಡು ಬರುತಿದ್ದರು. ಈತನ್ಮಧ್ಯೆ ರಫೀಕ್, ಮಕ್ಕಳನ್ನು ತÀನಗೆ ನೀಡಬೇಕೆಂದು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದಾರೆ. ಈ ವಾಜ್ಯ ನ್ಯಾಯಾಲಯದಲ್ಲಿ ಇರುವಾಗಲೇ ರಫೀಕ್ ತನ್ನ ಮನೆಗೆ ಏಕಾಏಕಿ ಆಕ್ರಮ ಪ್ರವೇಶ ಮಾಡಿ ಪತ್ನಿ ಫಾತಿಮಾ ಮೇಲೆ ಹಲ್ಲೆ ನಡೆಸಿ ನಗದು ಹಾಗೂ ಚಿನ್ನವನ್ನು ಅಪಹರಿಸಿದಲ್ಲದೆ ತನ್ನ ಎರಡು ಪುಟ್ಟ ಮೊಮ್ಮಕ್ಕಳನ್ನು ಕರೆದೊಯ್ದಿದ್ದಾರೆ ಎಂದು ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಮೂಸ ಮೊಕದ್ದಮೆ ದಾಖಲಿಸಿದ್ದಾರೆ. ಸುಂಟಿಕೊಪ್ಪ ಪೊಲೀಸರು ರಫೀಕ್ ವಿರುದ್ದ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.