ಮಡಿಕೇರಿ, ಫೆ. 11: ದಕ್ಷಿಣ ಕೊಡಗಿನ ಅಮ್ಮತ್ತಿ ಪಟ್ಟಣ ಸುತ್ತಮುತ್ತಲ ಪ್ರದೇಶಗಳಿಗೆ ಹೃದಯ ಭಾಗದಂತಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ದಿಕ್ಕಿನ ರಸ್ತೆಗಳು ಕಳೆದ ಹಲವಾರು ಸಮಯಗಳಿಂದ ದುರಸ್ತಿ ಕಾಣದೆ ಇದೀಗ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದೆ.ಎಲ್ಲಾ ರಸ್ತೆಗಳು ಭಾರೀ ಗುಂಡಿಗಳಿಂದ ಕೂಡಿದ್ದು, ಜನ-ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಈ ಬಗ್ಗೆ ಸ್ಥಳೀಯರು ಸಂಬಂಧಿಸಿದವರಲ್ಲಿ ಸಾಕಷ್ಟು ಬಾರಿ ಮನವಿ ಮಾಡಿದ್ದು, ಗಮನಸೆಳೆಯುತ್ತಾ ಬಂದಿದ್ದರೂ ಕೇವಲ ಕಣ್ಣೊರೆಸುವ ರೀತಿಯಲ್ಲಿ ಕೆಲಸ ಮಾತ್ರ ನಡೆಯುತ್ತಿದೆಯೇ ಹೊರತು ತೀರಾ ಅಗತ್ಯವಾಗಿರುವ ರಸ್ತೆಯನ್ನು ಸಮರ್ಪಕಗೊಳಿಸುವತ್ತ ಯಾರೂ ಆಸಕ್ತಿ ತೋರುತ್ತಿಲ್ಲ ಎಂಬ ಆಕ್ಷೇಪ ವ್ಯಕ್ತಗೊಂಡಿದೆ. ಈ ಅಸಮಾಧಾನ ಇದೀಗ ಜನರ ಭಾರೀ ಆಕ್ರೋಶಕ್ಕೂ ಕಾರಣವಾಗಿದ್ದು, ತಾ. 14 ರಂದು ಅಮ್ಮತ್ತಿ ಬಂದ್ನ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕಾಗಿಯೇ ಎಂಬಂತೆ ಅಮ್ಮತ್ತಿನಾಡು ಹಿತರಕ್ಷಣಾ ವೇದಿಕೆಯನ್ನು ರಚಿಸಲಾಗಿದ್ದು, ಇದರಲ್ಲಿ ಬಹುತೇಕ ಎಲ್ಲಾ ಸಂಘ-ಸಂಸ್ಥೆಗಳು ಸೇರಿವೆ. ಈ ವೇದಿಕೆಯ ಮೂಲಕ ತಾ. 14 ರಂದು ಪ್ರತಿಭಟನಾ ತ್ಮಕವಾಗಿ ಬಂದ್ನ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಶಾಶ್ವತವಾದ ರೀತಿಯಲ್ಲಿ ರಸ್ತೆಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಇಲ್ಲಿ ಕೇವಲ ಅಮ್ಮತ್ತಿ ಪಟ್ಟಣ ಮಾತ್ರ ಪರಿಗಣನೆಯಾಗುವುದಿಲ್ಲ. ಇಲ್ಲಿಂದ ಸಂಪರ್ಕ ಹೊಂದಿರುವ ವೀರಾಜಪೇಟೆ ರಸ್ತೆ, ಸಿದ್ದಾಪುರ, ಒಂಟಿಯಂಗಡಿ, ಪಾಲಿಬೆಟ್ಟ, ಕಳತ್ಮಾಡು, ಹೊಸೂರು, ಬಿಳುಗುಂದ, ಪುಲಿಯೇರಿ, ಕೊಂಡಂಗೇರಿ ಮಾರ್ಗ ಸೇರಿದಂತೆ ಸುತ್ತಮುತ್ತಲಿನ ಎಲ್ಲಾ ರಸ್ತೆಗಳ ಪರಿಸ್ಥಿತಿ ಶೋಚನೀಯವಾಗಿದೆ. ಕೇವಲ ಕ್ರಿಯಾ ಯೋಜನೆಗಳ ತಯಾರಿಕೆ, ಆಗಾಗ್ಗೆ ಒಂದಷ್ಟು ತೇಪೆಹಚ್ಚುವ ರೀತಿಯ ಕೆಲಸಗಳು ಮಾತ್ರ ನಡೆಯುತ್ತಿದೆಯೇ ವಿನಃ ಸಾರ್ವಜನಿಕರಿಗೆ ತೀರಾ ಅಗತ್ಯವಾಗಿರುವ ರಸ್ತೆಯನ್ನು ಶಾಶ್ವತವಾಗಿ ಸರಿಪಡಿಸಲು ಯಾರೂ ಮುಂದಾಗುತ್ತಿಲ್ಲ. ಗುತ್ತಿಗೆ ಪಡೆದ ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾತ್ರ ನಿರ್ವಹಿಸಿ ನಾಪತ್ತೆ ಯಾಗುತ್ತಿದ್ದಾರೆ. ರಸ್ತೆಯ ನಡುವೆ ಬರುವ ಮೋರಿ-ಸೇತುವೆಗಳನ್ನು ಸರಿಪಡಿಸಲಾಗುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.(ಮೊದಲ ಪುಟದಿಂದ) ಅಮ್ಮತ್ತಿಯಲ್ಲಿ ಪ್ರಮುಖವಾಗಿ ಕೊಡವ ಸಮಾಜವೂ ಇದ್ದು, ಇಲ್ಲಿಗೆ ಮದುವೆ ಸಮಾರಂಭಕ್ಕೆಂದು ಜಿಲ್ಲೆಯ ಹಲವಾರು ಭಾಗಗಳಿಂದ ಹೆಚ್ಚು ಜನರು ಆಗಮಿಸುತ್ತಿರುತ್ತಾರೆ. ಆದರೂ ಪ್ರಮುಖವಾದ ರಸ್ತೆಗಳನ್ನು ಸಂಬಂಧಿಸಿದ ಇಲಾಖೆ ಸರಿಪಡಿಸು ವತ್ತ ಗಮನಹರಿಸುತ್ತಿಲ್ಲ. ಕೇಳಿದರೆ ಕೆಲವಾರು ಹಾರಿಕೆಯ ಉತ್ತರಗಳು ಮಾತ್ರ ದೊರೆಯುತ್ತವೆ. ಇವೆಲ್ಲವನ್ನು ಖಂಡಿಸಿ ಇದೀಗ ತಾ. 14 ರಂದು ಸಾರ್ವತ್ರಿಕವಾದ ಸಹಕಾರದೊಂದಿಗೆ ಬಂದ್ ನಡೆಸುವ ನಿರ್ಧಾರಕ್ಕೆ ಬರಲಾಗಿದೆ ಎಂದು ವೇದಿಕೆಯ ಪ್ರಮುಖರಾದ ಪ್ರಿನ್ಸ್ ಗಣಪತಿ ಅವರು ತಿಳಿಸಿದ್ದಾರೆ.