ಶನಿವಾರಸಂತೆ, ಫೆ. 11: ಕೊಡ್ಲಿಪೇಟೆ ಸಮೀಪದ ಬೆಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗಳಿ ಗ್ರಾಮದಲ್ಲಿ ಗುರುವಾರ ಸಂಜೆ ನಾಯಿ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿದ್ದು, ರಾತ್ರಿ ಪುನಃ ಬಂದು ಎಳೆದೊಯ್ದು ತಿಂದು ಹಾಕಿದೆ. ಮೊದಲಿಗೆ ಜಾನುವಾರು ನಂತರ ನಾಯಿಯ ಮೇಲೆ ಚಿರತೆಯ ದಾಳಿ ಪ್ರಕರಣ ಗ್ರಾಮದಲ್ಲಿ ಭಯದ ವಾತಾವರಣ ಮೂಡಿಸಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ರಾತ್ರಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಕುಮಾರ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಗೋವಿಂದ್ ರಾಜ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ ಆಗಳಿ ಗ್ರಾಮದ ಗದ್ದೆಯಲ್ಲಿ ಚಿರತೆ ಬರುವ ಸ್ಥಳದಲ್ಲಿ ಜೀವಂತ ನಾಯಿ ಸಹಿತ ಬೋನ್ ಇರಿಸಿ, ಕ್ಯಾಮರಾ ಅಳವಡಿಸಿದ್ದು, ಚಿರತೆಯ ಸೆರೆಗೆ ಕ್ರಮಕೈಗೊಂಡಿದ್ದಾರೆ. ಆಹಾರ ಅರಸಿ ನಾಯಿ ತಿನ್ನಲು ಬರುವ ಚಿರತೆ ಬೋನಿನಲ್ಲಿ ಸಿಕ್ಕಿ ಬಿದ್ದು, ಲಾಕ್ ಆಗುತ್ತದೆ. ಆದರೆ, ನಾಯಿ ಜೀವಕ್ಕೆ ಯಾವುದೇ ರೀತಿಯ ಅಪಾಯವಾಗುವುದಿಲ್ಲ. ಅದು ಸುರಕ್ಷಿತವಾಗಿರುತ್ತದೆ ಎಂದು ಉಪ ವಲಯ ಅರಣ್ಯಾಧಿಕಾರಿ ಗೋವಿಂದ್ ರಾಜ್ ತಿಳಿಸಿದರು.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಪ್ರಫುಲ್ ಕುಮಾರ್ ಶೆಟ್ಟಿ, ಉಪ ವಲಯ ಅರಣ್ಯಾಧಿಕಾರಿ ಗೋವಿಂದ್ ರಾಜ್, ಅರಣ್ಯ ವೀಕ್ಷಕರಾದ ರಮೇಶ್, ಲೋಕೇಶ್, ಶೇಖರ್ ಪಾಲ್ಗೊಂಡಿದ್ದರು.