ಮಡಿಕೇರಿ, ಫೆ. ೧೦: ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ತಾ. ೧೨ ಮತ್ತು ೧೩ ರಂದು ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಜಾಗತಿಕ ಸಮ್ಮಿಲನ “ಫಾರ್ಕನೆಕ್ಟ್-೨೦೨೨”ವನ್ನು ಆಯೋಜಿಸಲಾಗುತ್ತಿದೆ. ರಾಜ್ಯ, ರಾಷ್ಟç ಮತ್ತು ಜಗತ್ತಿನ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಅರಣ್ಯ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳನ್ನು ಮತ್ತು ಪ್ರಸ್ತುತ ಮಹಾವಿದ್ಯಾಲಯದಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಡಿ ತಂದು ಹಿರಿಯ/ ಹಳೆಯ ವಿದ್ಯಾರ್ಥಿಗಳಿಂದ ಈಗಿನ ವಿದ್ಯಾರ್ಥಿಗಳಿಗೆ ಪದವಿನಂತರದಲ್ಲಿ ಅವರು ಕೈಗೊಳ್ಳಲು ಸಾಧ್ಯವಿರುವ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ಕೊಡಿಸುವುದರ ಜೊತೆಗೆ, ಹಳೆಯ ಮತ್ತು ಈಗಿನ ವಿದ್ಯಾರ್ಥಿಗಳ ನಡುವೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಕೃಷಿ ಅನುಸಂಧಾನ ಪರಿಷತ್ತು ನವದೆಹಲಿಯ ಹಣಕಾಸು ನೆರವಿನ ಯೋಜನೆಯಡಿಯಲ್ಲಿ ಆಯೋಜಿಸಲಾಗಿದ್ದು ದೇಶ ವಿದೇಶಗಳಲ್ಲಿರುವ ಸುಮಾರು ೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂತರ್ಜಾಲದ ಮುಖಾಂತರ ಹಾಗೂ ೧೫೦ಕ್ಕೂ ಹೆಚ್ಚು ಜನ ಭೌತಿಕವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸ್ತುತ ಅರಣ್ಯ ಮಹಾವಿದ್ಯಾಲಯದಲ್ಲಿ ಅಭ್ಯಸಿಸುತ್ತಿರುವ ೩೫೦ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ, ಸಲಹೆ ಮಾರ್ಗದರ್ಶನ ನೀಡಲಿದ್ದಾರೆ.