*ಗೋಣಿಕೊಪ್ಪ, ಫೆ. ೧೦: ಜಿಲ್ಲೆಯ ಲೈನ್‌ಮನೆಗಳಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ವಸತಿ ಹಾಗೂ ಇನ್ನಿತರ ಮೂಲ ಸೌಕರ್ಯವನ್ನು ಒದಗಿಸಿಕೊಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಮುಖ್ಯದ್ವಾರದಿಂದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕಚೇರಿಯವರೆಗೆ ರಾಜ್ಯ ಸಂಚಾಲಕ ರಮೇಶ್ ಮಾಯಮುಡಿ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಲೈನ್‌ಮನೆಗಳಲ್ಲಿ ವಾಸಮಾಡುವವರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುವಂತೆ ಮನವಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಚೆಲುವರಾಜು, ತಾಲೂಕು ವಸತಿ ಯೋಜನೆ ನೋಡಲ್ ಅಧಿಕಾರಿ ಅಕ್ರಂ ಪಾಷ, ವ್ಯವಸ್ಥಾಪಕಿ ಸ್ವರೂಪ್ ಇವರುಗಳಿಗೆ ಸಲ್ಲಿಸಲಾಯಿತು. ವೀರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕಿನಲ್ಲಿ ವಸತಿ ರಹಿತರಾಗಿ ಲೈನ್‌ಮನೆಗಳಲ್ಲಿ ವಾಸಿಸುವ ೪೮೦೦ ಪರಿಶಿಷ್ಟ ಪಂಗಡದ ಕುಟುಂಬದವರು ವಾಸಿಸುತ್ತಿದ್ದಾರೆ. ಇವರಿಗೆ ಇದುವರೆಗೂ ಸರ್ಕಾರದ ಮಟ್ಟದಲ್ಲಿ ಯಾವುದೇ ಸೌಕರ್ಯ ಗಳನ್ನು ಒದಗಿಸಿಕೊಟ್ಟಿಲ್ಲ. ಭೂ ಮಾಲೀಕರ ಲೈನ್‌ಮನೆಯಲ್ಲಿ ತಲತಲಾಂತರಗಳಿAದ ವಾಸಿಸುತ್ತಾ ಶೋಷಿತರಾಗುತ್ತಿದ್ದಾರೆ. ಭೂಮಾಲೀಕರು ಜನಾಂಗವನ್ನು ಗುಲಾಮರಂತೆ ದುಡಿಸಿಕೊಳ್ಳುತ್ತಿದ್ದು, ಮುಂದಿನ ಪೀಳಿಗೆಯ ಮಕ್ಕಳು ಈ ಪದ್ಧತಿಯ ಬೆಳವಣಿಗೆಯಿಂದ ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ವಸತಿ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಆಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯೆ ಬಿ.ಕೆ. ಶಾಂತಿ, ಜಿಲ್ಲಾ ಖಜಾಂಚಿ ಜೆ.ಎ ಅಣ್ಣಯ್ಯ, ಸಮಿತಿ ಸದಸ್ಯರುಗಳಾದ ಜೆ.ಕೆ. ಅಪುö್ಪ, ಕವಿತಾ, ರಮೇಶ್. ಪಿ.ಕೆ, ಮಂಜುನಾಥ ಪಿ.ಸಿ., ಎಂ.ಎ. ಕೃಷ್ಣ ಸೇರಿದಂತೆ ನೂರಕ್ಕೂ ಹೆಚ್ಚು ಲೈನ್ ಮನೆಗಳಲ್ಲಿ ವಾಸಿಸುವವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
- ಎನ್.ಎನ್. ದಿನೇಶ್