ಮಡಿಕೇರಿ, ಫೆ. 11: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ವರ್ಷಗಳ ಹಿಂದೆಯೇ ಮಂಜೂರಾತಿಯಾಗಿ ಹಲವು ಕಾರಣಗಳಿಂದಾಗಿ ಆಮೆಗತಿಯಲ್ಲಿ ಸಾಗುತ್ತಿರುವ ಒಳಚರಂಡಿ ಯೋಜನೆಯ ಕಾಮಗಾರಿ ತ್ವರಿತವಾಗಿ ಮುಗಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರು ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಭಿಯಂತರರಿಗೆ ಸೂಚಿಸಿದರು. ಇಂದು ನಗರದ ಹೊರವಲಯದಲ್ಲಿರುವ ಗಾಲ್ಫ್ ಗ್ರೌಂಡ್ ಬಳಿ ಒಳಚರಂಡಿ ಮಂಡಳಿಗೆ ಮಂಜೂರಾಗಿರುವ ಜಾಗದಲ್ಲಿ ನಿರ್ಮಿಸಲುದ್ದೇಶಿಸಿರುವ ಎಸ್.ಟಿ.ಪಿ (ಸೀವೇಜ್ ಟ್ರೀಟ್‍ಮೆಂಟ್ ಪ್ಲಾಂಟ್) - ಕೊಳಚೆ ನೀರು ಸಂಸ್ಕರಣಾ ಘಟಕದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕರು, ಸ್ಥಳದಲ್ಲಿ ಹಾಜರಿದ್ದ ನಗರಸಭೆ ಪೌರಾಯುಕ್ತರು ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳಿಗೆ, ಒಳಚರಂಡಿ ಕಾಮಗಾರಿಗೆ ಸಂಬಂಧಿಸಿದ ಹಲವು ಪೈಪ್‍ಲೈನ್‍ಗಳು ಸಾಗಬೇಕಾಗಿರುವ ಕಡೆಗಳಲ್ಲಿನ ಜಾಗದ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.

49 ಕೋಟಿ ವೆಚ್ಚದ ಯೋಜನೆ

ಎಸ್.ಟಿ.ಪಿ ಸೇರಿದಂತೆ ನಗರದೆಲ್ಲೆಡೆ ಪೈಪ್‍ಲೈನ್ ಅಳವಡಿಕೆಗೆ ಒಟ್ಟು ರೂ. 49 ಕೋಟಿ ವೆಚ್ಚವಾಗಲಿದೆ. ಪೈಪ್‍ಲೈನ್ ಉದ್ದೇಶಿತ 109 ಕಿ.ಮೀ. ಅನ್ನು ಕಾರಣಾಂತರಗಳಿಂದ 85 ಕಿ.ಮೀ.ಗೆ ಸೀಮಿತಮಾಡಲಾಗಿದೆ. ಇದರಲ್ಲಿ ಈಗಾಗಲೇ 69 ಕಿ.ಮೀ. ನಷ್ಟು ಕಾಮಗಾರಿ ನಡೆದಿದೆ. ಕೆಲವು ಕಡೆಗಳಲ್ಲಿ ಒಳಚರಂಡಿ ಮಂಡಳಿಗೆ ಜಾಗ ಮಂಜೂರಾತಿಗೆ ಸಮಸ್ಯೆಗಳಿದ್ದು, ಇದನ್ನು ಬಗೆಹರಿಸಲು ಸಂಬಂಧಿಸಿದವರಿಗೆ ಸೂಚಿಸಲಾಗಿದೆ ಎಂದರು.

‘ಇನ್ನು ಯಾವುದೇ ಯೋಜನೆ ಬೇಡ’

ಗುಡ್ಡಗಾಡು ಪ್ರದೇಶವಾಗಿರುವ ಕೊಡಗಿಗೆ ಇನ್ನು ಮುಂದೆ ಒಳಚರಂಡಿ ಸಂಬಂಧ ಯಾವುದೇ ಯೋಜನೆಗಳು ಬೇಡ. ಅತ್ಯುತ್ತಮ ಗುಣಮಟ್ಟದಲ್ಲಿದ್ದ ರಸ್ತೆಗಳನ್ನು ಒಳಚರಂಡಿ ಕಾಮಗಾರಿ ವೇಳೆ ಹಾಳುಮಾಡಲಾಗಿದೆ. ಇನ್ನು ಉಳಿದ ಪೈಪ್‍ಲೈನ್ ಕಾಮಗಾರಿ ನಡೆಸುವ ಸಂದರ್ಭ, ಕಾಮಗಾರಿ ಪೂರ್ಣಗೊಳಿಸಿದ ಬಳಿಕ ರಸ್ತೆ ಯಥಾಸ್ಥಿತಿಯಲ್ಲಿರುವಂತೆ ಕ್ರಮ ವಹಿಸಬೇಕಾಗಿ ಒಳಚರಂಡಿ ಮಂಡಳಿಯ ಅಧಿಕಾರಿಗಳಿಗೆ ಸೂಚಿಸಿದರು.

ಪರಿಶೀಲನೆ ಸಂದರ್ಭ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧೀಕ್ಷಕ ಅಭಿಯಂತರ ನಟರಾಜ್, ಮಡಿಕೇರಿ ನಗರಸಭಾ ಪೌರಾಯುಕ್ತ ಎಸ್.ವಿ ರಾಮದಾಸ್, ಭೂ ದಾಖಲೆಗಳ ಸಹಾಯಕ ನಿರ್ದೇಶಕ ವಿರೂಪಾಕ್ಷ, ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿನಯ ಹಾಗೂ ಇತರ ಅಧಿಕಾರಿಗಳು ಇದ್ದರು.