ಶ್ರೀಮಂಗಲ, ಫೆ. 11: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ತಿತಿಮತಿ ಚೌಡಿಕಟ್ಟೆಯಿಂದ ಚೀನಿಹಡ್ಲು ಮೂಲಕ ಕೆ.ಎಂ.ಕೊಲ್ಲಿಯವರೆಗೆ ದ.ಕೊಡಗಿನ ಭಾಗಕ್ಕೆ ವನ್ಯ ಪ್ರಾಣಿಗಳು ನುಸುಳುವ ಮುಖ್ಯ ಜಾಗವಾಗಿದ್ದು, ಇದನ್ನು ತಡೆಗಟ್ಟಲು ಯೋಜನೆ ರೂಪಿಸಲಾಗಿದ್ದು, ಇದರಲ್ಲಿ 9 ಕಿ.ಮೀ ಕಾಮಗಾರಿ ಪೂರ್ಣವಾಗಿದೆ. ಉಳಿದ 3.3ಕಿ.ಮೀ ಕಾಮಗಾರಿ ಮುಂದುವರೆಸಲು ಹಾಡಿನಿವಾಸಿಗಳು ತಡೆ ಮಾಡುತ್ತಿರುವುದರಿಂದ ಜನಪ್ರತಿನಿಧಿಗಳು, ಗ್ರ್ರಾಮಸ್ಥರು, ಅರಣ್ಯ ಇಲಾಖಾ ಅಧಿಕಾರಿಗಳು, ಹಾಡಿ ನಿವಾಸಿಗಳು ಮತ್ತು ಬೆಳೆಗಾರರ ಪ್ರತಿನಿಧಿಗಳ ಸಭೆ ಕರೆದು ಬಗೆಹರಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾಕುಶಾಲಪ್ಪ ಅವರು ಅಭಿಪ್ರಾಯಿಸಿದರು.
ತಿತಿಮತಿ ಸಮೀಪ ಚೀನಿಹಡ್ಲುವಿನಲ್ಲಿ ಅರಣ್ಯದ ಸರಹದ್ದುವಿನ ಮೂಲಕ ಮುಂದುವರೆದ 3.3 ಕಿ.ಮೀಗೆ ರೈಲ್ವೆ ಬ್ಯಾರಿಕೇಡ್ ಅಳವಡಿಸುವ ಕಾಮಗಾರಿ ಪರಿಶೀಲಿಸಿ ಬೆಳೆಗಾರರು, ಹಾಡಿ ನಿವಾಸಿಗಳು ಮತ್ತು ಅರಣ್ಯಇಲಾಖೆಯ ಅಧಿಕಾರಿಗಳೊಂದಿಗೆ ಅವರು ಚರ್ಚಿಸಿ ಮಾತನಾಡಿದರು.
ಈ ಸಂದರ್ಭ ಬೆಳೆಗಾರರ ಪ್ರಮುಖರು ಮಾತನಾಡಿ, ದ.ಕೊಡಗಿನ ತಿತಿಮತಿ, ಕೋಣನಕಟ್ಟೆ, ಸುಳುಗೋಡು, ಮಾಯಮುಡಿ, ಬಾಳಾಜಿ ಸೇರಿದಂತೆ ಇತರ ಭಾಗಗಳಿಗೆ ಚೀನಿಹಡ್ಲುವಿನ ಮೂಲಕ ಕಾಡಾನೆಗಳು ನುಸುಳುತ್ತಿವೆ. ಈಗಾಗಲೇ ತಿತಿಮತಿ ಚೌಡಿಕಟ್ಟೆಯಿಂದ ಚೀನಿಹಡ್ಲುವಿನವರೆಗೆ 9 ಕಿ.ಮೀ ವ್ಯಾಪ್ತಿಯ ಅರಣ್ಯ ಸರಹದ್ದಿನಲ್ಲಿ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 3.3 ಕಿ.ಮೀಗೆ ಸುಮಾರು ರೂ.4.5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈ ಕಾಮಗಾರಿಯನ್ನು ಮಾರ್ಚ್ ತಿಂಗಳವರೆಗೆ ಮಾಡದಿದ್ದರೆ ಅನುದಾನ ವಾಪಾಸು ಹೋಗಲಿದೆ. ವನ್ಯಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಬೆಳೆಹಾನಿ, ಪ್ರಾಣಹಾನಿಗಳಂತಹ ಗಂಭೀರ ಸಮಸ್ಯೆ ಮುಂದುವರೆಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸರ್ಕಾರದಿಂದ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಮಂಜೂರಾಗಿರುವ ದೊಡ್ಡ ಪ್ರಮಾಣದ ಅನುದಾನವನ್ನು ವಿನಿಯೋಗಿಸಿಕೊಳ್ಳಲು ಉಂಟಾಗಿರುವ ಅಡೆತಡೆಯನ್ನು ನಿವಾರಿಸಿ, ಬೆಳೆಗಾರರಿಗೆ ಮತ್ತು ಹಾಡಿ ನಿವಾಸಿಗಳಿಗೆ ಅನುಕೂಲವಾಗುವಂತೆ ಕಾಮಗಾರಿ ಮುಂದುವರೆಸುವಂತೆ ಒತ್ತಾಯಿಸಿದರು. 2019ರಲ್ಲಿ ಈ ಯೋಜನೆಗೆ ಅನುದಾನ ಮಂಜೂರಾಗಿ ಕಾಮಗಾರಿ ಸ್ಥಗಿತವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಸಂದರ್ಭ ಹಾಡಿ ನಿವಾಸಿಗಳ ಪರ ಮಾತನಾಡಿದ ಜಿ.ಪಂ. ಮಾಜಿ ಸದಸ್ಯೆ ಪಂಕಜ, ತಿತಿಮತಿ ಗ್ರಾ.ಪಂ.ಅಧ್ಯಕ್ಷೆ ಆಶಾ, ಸದಸ್ಯೆ ವಿಜಯ ಅವರು ಅರಣ್ಯದ ಒಳಗೆ ಸುಮಾರು 100 ಹಾಡಿಗಳಿದ್ದು,ಇಲ್ಲಿ ತೋಟ ಗದ್ದೆಗಳೂ ಸಹ ಇವೆ. ಹಾಡಿಗಳನ್ನು ಸೇರಿಸಿ ಬ್ಯಾರಿಕೇಡ್ ಹಾಕುವ ಬದಲು ಹಾಡಿಯ ಸುತ್ತ ಬ್ಯಾರಿಕೇಡ್ ಕಾಮಗಾರಿ ಮಾಡುವಂತೆ ಯೋಜನೆ ಬದಲಾಯಿಸಬೇಕೆಂದು, ಹಾಡಿಯ ಸುತ್ತ ಸೋಲಾರ್ ಬೇಲಿ ಮತ್ತು ಕಂದಕ ನಿರ್ಮಾಣ ಮಾಡಿದರೆ ಸಾಲದು. ಇಲ್ಲಿಗೆ ರೈಲ್ವೆ ಬ್ಯಾರಿಕೇಡ್ ನಿರ್ಮಿಸುವಂತೆ ಒತ್ತಾಯಿಸಿದರು.
ತಿತಿಮತಿ ವನ್ಯಜೀವಿ ವಿಭಾಗದ ಎ.ಸಿ.ಎಫ್. ಸತೀಶ್ ಮಾತನಾಡಿ, ಅರಣ್ಯದ ಸರಹದ್ದಿನಲ್ಲಿ ಬ್ಯಾರಿಕೇಡ್ ಹಾಕಲು ಯೋಜನೆ ಮಂಜೂರಾಗಿದೆ. ಈ ಸ್ಥಳದಿಂದಲೇ ದ.ಕೊಡಗಿನ ಹಲವು ಭಾÀಗಕ್ಕೆ ಕಾಡಾನೆಗಳು ಹೆಚ್ಚಾಗಿ ನುಸುಳುತ್ತ್ತಿರುವುದನ್ನು ಗುರುತಿಸಲಾಗಿದೆ. ಆದ್ದರಿಂದ ಇಲ್ಲಿಗೆ ಬ್ಯಾರಿಕೇಡ್ ಯೋಜನೆ ಮಂಜೂರಾಗಿದೆ. ಇದನ್ನು ಹಾಡಿಯ ಸುತ್ತ ಮಾಡಲು ಸಾಧ್ಯವಿಲ್ಲ. ಹಾಡಿನಿವಾಸಿಗಳ ಸುರಕ್ಷತೆಗೆ ಮತ್ತು ಇಲ್ಲಿನ ಅರಣ್ಯವಾಸಿಗಳ ಬೆಳೆ ರಕ್ಷಣೆಗೆ ಈಗಾಗಲೇ ಕಂದಕವನ್ನು ನಿರ್ಮಿಸಲಾಗಿದ್ದು, ಕಂದಕವನ್ನು ದುರಸ್ತಿಗೊಳಿಸಿ ಸೋಲಾರ್ ಬೇಲಿ ನಿರ್ಮಿಸಿಕೊಡುವುದಾಗಿಯೂ ಹಾಗೂ ಇಲ್ಲಿನ ಹಾಡಿಯಲ್ಲಿರುವ ಅರಣ್ಯವಾಸಿಗಳಿಗೆ ಕಾನೂನು ಬದ್ಧ ಮೂಲಭೂತ ಸೌಕರ್ಯ ಒದಗಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಅವರು, ರೈಲ್ವೆ ಬ್ಯಾರಿಕೇಡ್ ಕಾಮಗಾರಿಯನ್ನು ಮುಂದುವರೆಸಲು ಸಹಕಾರ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಸುಜಾಕುಶಾಲಪ್ಪ ಅವರು, ದಿನನಿತ್ಯ ವನ್ಯ ಪ್ರಾಣಿ- ಮಾನವ ಸಂಘರ್ಷ ಹೆಚ್ಚಾಗುತ್ತಿದ್ದು, ಬೆಳೆನಷ್ಟದೊಂದಿಗೆ ಅಮಾಯಕರ ಜೀವ ಹಾನಿಯಾಗುತ್ತಿದೆ. ಇದರಿಂದ ಕಾರ್ಮಿಕರು ಹಾಗೂ ಬೆಳೆಗಾರರು ಸಂಕಷ್ಟ ಪಡುವಂತಾಗಿದೆ. ವನ್ಯ ಪ್ರಾಣಿಗಳ ಹಾವಳಿ ತಡೆಗೆ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಅನುದಾನವನ್ನು ವಿನಿಯೋಗಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದರೊಂದಿಗೆ ಹಾಡಿ ನಿವಾಸಿಗಳ ಸಮಸ್ಯೆಗೆ ಪ್ರತ್ಯೇಕ ಯೋಜನೆ ರೂಪಿಸಿ ಸಮಸ್ಯೆ ನಿವಾರಿಸಬೇಕಾಗಿದೆ ಎಂದು ಹೇಳಿದರು.
ಈ ಸಂದರ್ಭ ಕೊಡಗು ಬೆಳೆಗಾರರ ಒಕ್ಕೂಟದ ತಾಂತ್ರಿಕ ಸಲಹೆಗಾರ ಚೆಪ್ಪುಡಿರ ಶರಿಸುಬ್ಬಯ್ಯ, ಖಜಾಂಚಿ ಮಾಣೀರ ವಿಜಯ್ ನಂಜಪ್ಪ, ಕೊಲ್ಲೀರ ಧರ್ಮಜ ಉತ್ತಪ್ಪ, ಚೆಪ್ಪುಡಿರ ಮಾಚಯ್ಯ, ಕೊಡಗು ಸಂರಕ್ಷಣಾ ವೇದಿಕೆಯ ಅಧ್ಯಕ್ಷ ಚೊಟ್ಟೇಕ್‍ಮಾಡ ರಾಜೀವ್‍ಬೋಪಯ್ಯ, ಕೊಡಗು ವನ್ಯಜೀವಿ ಸಂಘದ ಕರ್ನಲ್ ಸಿ.ಪಿ. ಮುತ್ತಣ್ಣ, ತಿತಿಮತಿ ದೇವರಪುರ ಗ್ರೀನ್ ವಿಲೇಜ್ ಕಮ್ಯೂನಿಟಿ ಫೋರಂ ಪದಾಧಿಕಾರಿಗಳು, ಪಿ.ಡಿ.ಓ ಮಮತ, ಅರಣ್ಯ ಇಲಾಖಾ ಅಧಿಕಾರಿಗಳಾದ ಎ.ಸಿ.ಎಫ್. ಪಂದ್ಯಂಡ ಉತ್ತಪ್ಪ, ತಿತಿಮತಿ ಆರ್.ಎಫ್.ಓ. ಅಶೋಕ್, ಅನೆಚೌಕೂರು ಆರ್.ಎಫ್.ಓ. ಕಿರಣ್‍ಕುಮಾರ್, ಗೋಣಿಕೊಪ್ಪಲು ಉಪನಿರೀಕ್ಷಕ ಹೆಚ್.ಸುಬ್ಬಯ್ಯ, ಸೇರಿದಂತೆ ಕೋಣನಕಟ್ಟೆÉ, ಸುಳುಗೋಡು, ಮಾಯಮುಡಿ, ತಿತಿಮತಿ, ದೇವರಪುರ, ಬಾಳಾಜಿ, ಅತ್ತೂರು, ಕೈಕೇರಿ, ಇತರ ಭಾಗದ ಬೆಳೆಗಾರರು ಹಾಗೂ ಚೀನಿಹಡ್ಲುವಿನ ಅರಣ್ಯವಾಸಿಗಳು ಹಾಜರಿದ್ದರು.