ಕಣಿವೆ, ಫೆ. ೧೦: ಇಲ್ಲಿಗೆ ಸಮೀಪದ ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿನ ಜೇನುಕಲ್ಲು ಬೆಟ್ಟ ಪ್ರದೇಶವನ್ನು ಅಭಿವೃದ್ದಿ ಪಡಿಸುವ ಮೂಲಕ ಪ್ರಮುಖ ಯಾತ್ರಾ ಸ್ಥಳವಾಗಿ ಮಾರ್ಪಡಿಸಲು ಜಿಲ್ಲಾಡಳಿತ ಹಾಗೂ ಕ್ಷೇತ್ರದ ಶಾಸಕರು ಯೋಜನೆ ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನೋಡುಗರನ್ನು ಆಕರ್ಷಿಸುವ ಪ್ರಕೃತಿ ದತ್ತವಾಗಿ ಇರುವಂತಹ ಗ್ರಾಮದ ಜೇನು ಕಲ್ಲು ಗುಡ್ಡಕ್ಕೆ ತನ್ನದೇ ಆದ ಐತಿಹ್ಯವಿದೆ. ಕೂಗಳತೆ ದೂರದಲ್ಲಿನ ಕಾವೇರಿ ನದಿ ದಂಡೆಯ ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ಸನ್ನಿದಿಯ ಸನಿಹವೇ ಇರುವ ಈ ಜೇನುಕಲ್ಲು ಬೆಟ್ಟದ ಕಲ್ಲು ಬಂಡೆಯ ಮೇಲೆ ಸೀತೆಯ ತೊಟ್ಟಿಲು ಇರುವ ಬಗ್ಗೆ ಸ್ಥಳೀಯರು ಹೇಳುತ್ತಾರೆ.
ಆದಿಕಾಲದಲ್ಲಿ ಶ್ರೀ ರಾಮರು ಖುದ್ದು ಬಂದು ಕಣಿವೆಯ ಕಾವೇರಿ ನದಿ ದಂಡೆಯ ಪೂರ್ವಾಭಿ ಮುಖವಾಗಿ ಮರಳಿನ ಲಿಂಗವನ್ನು ಪ್ರತಿಷ್ಠಾಪಿಸಿದ ಸಂದರ್ಭದಲ್ಲಿ ದಟ್ಟಕಾನನದೊಳಗಿನ ಈ ಬೆಟ್ಟದ ಮೇಲೆಯೂ ಬಂದು ವಿಶಾಲವಾದ ಕಲ್ಲು ಬಂಡೆಯನ್ನು ಸೀತೆಯ ತೊಟ್ಟಿಲಾಗಿಸಿರುವ ಬಗ್ಗೆ ಪೂರ್ವಜರು ಹೇಳುತ್ತಿದ್ದರು. ಅಂತೆಯೇ ಅದು ಹಾಗೆಯೇ ಪ್ರತೀತಿಗೊಂಡಿದೆ ಎಂದು ಸೀಗೆಹೊಸೂರಿನ ಹಿರಿಯ ನಿವಾಸಿ ಜವರೇಗೌಡ ಹೇಳುತ್ತಾರೆ.
ದಟ್ಟಾರಣ್ಯದ ಪ್ರದೇಶವಾಗಿದ್ದ ಇಲ್ಲಿ ಸ್ವಾಭಾವಿಕವಾಗಿ ಬಿಡುತ್ತಿದ್ದ ವನಸುಮಗಳ ರಾಶಿಗೆ ಮನಸೋತು ಮುತ್ತಿಡುತ್ತಿದ್ದ ದುಂಬಿಗಳು ಹಾಗೂ ಜೇನ್ನೋಣಗಳ ರಾಶಿಯೇ ಇಲ್ಲಿ ಹೆಚ್ಚಾಗಿ ಕಂಡು ಬರುತ್ತಿತ್ತು. ಸರಿ ಸುಮಾರು ಸಾವಿರಾರು ಅಡಿ ಎತ್ತರದ ಬೃಹತ್ ಕಲ್ಲು ಬಂಡೆಗಳ ಮೇಲೆ ಸಾಲು ಸಾಲಾಗಿ ತರಹೇವಾರಿ ತಳಿಯ ಜೇನು ನೊಣಗಳು ಗೂಡು ಕಟ್ಟುತ್ತಿದ್ದು ದರಿಂದ ಈ ಸ್ಥಳಕ್ಕೆ ಜೇನುಕಲ್ಲು ಬೆಟ್ಟ ಎಂಥಲೂ ಹೆಸರು ಬಂತು.
ಇದೀಗ ವನಸುಮ ರಾಶಿಗಳ ಹನನದಿಂದಾಗಿ ಜೇನು ಸಂತತಿ ವಿನಾಶದತ್ತ ಸಾಗುತ್ತಿರುವ ಈ ಹೊತ್ತಿನಲ್ಲಿ ಈ ಜೇನುಕಲ್ಲು ಗುಡ್ಡದ ಮೇಲೆ ಜೇನು ಗೂಡುಗಳು ವಿರಳವಾಗಿವೆ. ಆದಾಗ್ಯೂ ಜೋಡಿ ಬಸವಣ್ಣ ದೇವರ ಗುಡಿ ಹಾಗೂ ಸೀತೆ ತೊಟ್ಟಿಲು ಇರುವ ಕಾರಣದಿಂದ ಈ ಪ್ರದೇಶವನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸಬೇಕು.
ಕಾಡಾನೆಗಳ ನಿರಂತರ ಹಾವಳಿ ಯಿಂದಾಗಿ ತತ್ತರಗೊಂಡಿರುವ ಇಲ್ಲಿನ ಕಾಡಂಚಿನ ಜನರ ಬದುಕು ಪ್ರವಾಸೋದ್ಯಮ ಅಭಿವೃದ್ದಿಯಿಂದಾಗಿ ಒಂದಷ್ಟು ಚೇತರಿಸಿಕೊಂಡರೆ ಅನುಕೂಲವಾಗುತ್ತದೆ ಎಂಬುದು ಸ್ಥಳೀಯ ನಿವಾಸಿಗಳ ಅಭಿಮತ.
ಜೇನು ಕಲ್ಲು ಕ್ಷೇತ್ರದ ಮಾದರಿ
ಸೀಗೆ ಹೊಸೂರು ಜೇನು ಕಲ್ಲು ಬೆಟ್ಟದ ಮಾದರಿಯಲ್ಲಿಯೇ ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಜೇನು ಕಲ್ಲು ಬೆಟ್ಟವಿದ್ದು, ಆ ಕ್ಷೇತ್ರ ಪ್ರಖ್ಯಾತಿ ಹಾಗೂ ಅಭಿವೃದ್ಧಿಗೊಂಡ ಮಾದರಿಯಲ್ಲಿಯೇ ನಮ್ಮೂರಿನ ಜೇನುಕಲ್ಲು ಬೆಟ್ಟವನ್ನು ಅಭಿವೃದ್ಧಿಪಡಿಸಲು ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಮುಂದಾಗಬೇಕೆAದು ಗ್ರಾಮದ ಮುಖಂಡ ಜವರೇಗೌಡ ಒತ್ತಾಯಿಸಿದ್ದಾರೆ.
ಒಂದು ವೇಳೆ ಈ ಕ್ಷೇತ್ರ ಅಭಿವೃದ್ದಿ ಹೊಂದಿದ್ದೇ ಆದಲ್ಲಿ ಕುಶಾಲನಗರದ ಸುತ್ತ ಮುತ್ತ ಇರುವ ವಿವಿಧ ಪ್ರವಾಸೀ ಕ್ಷೇತ್ರಗಳ ಮಾದರಿಯಲ್ಲಿ ಕಣಿವೆಯ ರಾಮಲಿಂಗೇಶ್ವರ ಸನ್ನಿಧಿ, ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಿರುವ ಹಾರಂಗಿ ಬಲದಂಡೆ ಕಾಲುವೆಯ ಅಕ್ವೆಡಕ್ಟ್, ತೂಗು ಸೇತುವೆ, ಹಾಗೆಯೇ ೧೫ ಕಿಮೀ ದೂರದಲ್ಲಿನ ಹೊನ್ನಮ್ಮನಕೆರೆ ಕ್ಷೇತ್ರಗಳು ಕೂಡ ಪ್ರವಾಸಿಗರನ್ನು ಆಕರ್ಷಿಸಲಿವೆ ಎಂಬುದು ಗ್ರಾಮಸ್ಥರ ಅಂಬೋಣ...
- ಕೆ.ಎಸ್. ಮೂರ್ತಿ