ಸೋಮವಾರಪೇಟೆ,ಫೆ.11: ಸಮೀಪದ ಅಬ್ಬೂರುಕಟ್ಟೆ ಹಾಗೂ ಗೋಣಿಮರೂರು ಗ್ರಾಮದ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಹಾಗೂ ಮಾರುತಿ ವ್ಯಾನ್ ನಡುವೆ ಡಿಕ್ಕಿ ಸಂಭವಿಸಿದ್ದು, ವ್ಯಾನಿನಲ್ಲಿದ್ದ ನಾಲ್ವರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಾಣಾವರ ಕಡೆಯಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಮಾರುತಿ ವ್ಯಾನ್ ಹಾಗೂ ಪಟ್ಟಣದಿಂದ ಬಾಣಾವರ ಮಾರ್ಗವಾಗಿ ಶನಿವಾರಸಂತೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಅವಘಡ ಸಂಭವಿಸಿದೆ. ಆಲೂರುಸಿದ್ದಾಪುರ ಐಟಿಐ ಕಾಲೇಜಿನಲ್ಲಿ ನಡೆದ ಪರೀಕ್ಷೆ ಮುಗಿಸಿ ವ್ಯಾನಿನಲ್ಲಿ ತೆರಳುತ್ತಿದ್ದ ಮಡಿಕೇರಿಯ ರಾಕೇಶ್, ನಟರಾಜ್, ಪ್ರದೀಪ್, ಗುರುಪ್ರಸಾದ್ ಅವರುಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದ, ಅಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಸ್ಥಳೀಯರು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ. ಘಟನೆಯಿಂದ ಮಾರುತಿ ವ್ಯಾನ್ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.