ಕೋವರ್ ಕೊಲ್ಲಿ ಇಂದ್ರೇಶ್
ಮಡಿಕೇರಿ, ಫೆ. ೧೦: ಗುರುವಾರ ಅರೇಬಿಕಾ ಪಾರ್ಚ್ಮೆಂಟ್ ಕಾಫಿ ದರ ೫೦ ಕೆ.ಜಿ. ಚೀಲವೊಂದಕ್ಕೆ ೧೬,೨೦೦ ರೂಪಾಯಿಗಳಿಗೆ ಮಾರಾಟ ವಾಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ.
೧೯೯೩ರಲ್ಲಿ ಕೇಂದ್ರ ಸರ್ಕಾರ ಕಾಫಿಯ ಮೇಲಿನ ನಿಯಂತ್ರಣವನ್ನು ತೆಗೆದು ಹಾಕಿ ಮುಕ್ತ ಮಾರಾಟಕ್ಕೆ ಅನುಮತಿ ನೀಡಿದ ನಂತರ ಇಷ್ಟೊಂದು ದರ ದೊರೆತಿರುವುದು ಇದೇ ಮೊದಲಾಗಿದೆ. ಕಾಫಿಯ ಈ ದರ ಏರಿಕೆಯು ಅರೇಬಿಕಾ ಪಾರ್ಚ್ ಮೆಂಟ್ ಕಾಫಿಗೆ ಮಾತ್ರ ಸೀಮಿತ ವಾಗಿದ್ದು ವಿಶ್ವದ ಅತ್ಯಂತ ದೊಡ್ಡ ಕಾಫಿ ಉತ್ಪಾದಕ ದೇಶವಾಗಿರುವ ಬ್ರೆಜಿಲ್ನ ಕಾಫಿ ಉತ್ಪಾದನೆಗೆ ಹಿಮಪಾತದಿಂದ ಹೊಡೆತ ಬಿದ್ದಿರುವುದೇ ಇಲ್ಲಿನ ದರ ಏರಿಕೆಗೆ ಕಾರಣವಾಗಿದೆ ಎಂದು ಕಾಫಿ ತಜ್ಞರ ಅಭಿಪ್ರಾಯವಾಗಿದೆ. ಬ್ರೆಜಿಲ್ನಲ್ಲಿ ಹಿಮಪಾತದಿಂದಾಗಿ ಶೇ. ೧೦ ರಷ್ಟು ಬೆಳೆ ನಾಶವಾಗಿ ಅಂರ್ರಾಷ್ಟಿçÃಯ ಮಾರುಕಟ್ಟೆಗೆ ಅರೇಬಿಕಾ ಕಾಫಿಯ ಸರಬರಾಜಿನಲ್ಲಿ ಕೊರತೆ ಆಗಿದ್ದರಿಂದ ಬೇಡಿಕೆ ಹೆಚ್ಚಾಗಿ ಕಾಫಿ ದರ ಏರಿಕೆ ದಾಖಲಿಸಿದೆ. ಆದರೆ ಅರೇಬಿಕಾ ಚೆರಿ, ರೋಬಸ್ಟಾ ಚೆರಿ ಮತ್ತು ರೋಬಸ್ಟಾ ಪಾರ್ಚ್ಮೆಂಟ್ ಕಾಫಿಯ ದರದಲ್ಲಿ ಏರಿಕೆಯೇನೂ ದಾಖಲಾಗಿಲ್ಲ.
ಕಾಫಿ ದರ ಏರಿಕೆಯ ಕುರಿತು ಮಾಹಿತಿ ನೀಡಿದ ಮೂಡಿಗೆರೆಯ ಮುದ್ರೆಮನೆ ಕಾಫಿ ಕ್ಯೂರಿಂಗ್ ವರ್ಕ್ಸ್ನ ವ್ಯವಸ್ಥಾಪಕ ಉಮೇಶ್ ಅವರು ಗುರುವಾರ ಅರೇಬಿಕಾ ಪಾರ್ಚ್ ಮೆಂಟ್ ಕಾಫಿ ದರ ಚೀಲಕ್ಕೆ ೧೬,೨೦೦ ರೂಪಾಯಿಗಳಿಗೆ ಏರಿಕೆ ಆಗಿದ್ದು, ಚೆರಿ ಕಾಫಿ ದರ ೭೬೫೦ ಇದ್ದು, ರೋಬಸ್ಟಾ ಕಾಫಿ ದರ ಚೆರಿ ೪,೧೦೦ ಮತ್ತು ರೊಬಸ್ಟಾ ಪಾರ್ಚ್ಮೆಂಟ್ ೭,೬೦೦ ಇದೆ ಎಂದರು. ಚೆರಿ ಕಾಫಿಯ ತೇವಾಂಶ ಆಧರಿಸಿ ದರವನ್ನು ನಿಗದಿ ಮಾಡಲಾ ಗುತ್ತದೆ ಎಂದು ಅವರು ಹೇಳಿದರು.
ಸೋಮವಾರಪೇಟೆಯ ಬ್ಲಾನ್ ಕಾಫಿ ಸಂಸ್ಥೆಯ ವ್ಯವಸ್ಥಾಪಕ ಪಾಲುದಾರ ಪ್ರವೀಣ್ ಅವರೊಂದಿಗೆ ಮಾತನಾಡಿದಾಗ ಇಂದು ಅರೇಬಿಕಾ ಪಾರ್ಚ್ಮೆಂಟ್ ಕಾಫಿಯನ್ನು ೧೬,೨೦೦ ರೂಪಾಯಿಗಳಿಗೆ ಖರೀದಿಸಲಾಗುತ್ತಿದೆ ಎಂದರು. ಅರೇಬಿಕಾ ಚೆರಿ ಕಾಫಿಯ ದರ ೭೬೦೦ ರೂಪಾಯಿ ಇದೆ ಎಂದರಲ್ಲದೆ, ಈ ದರ ಸಾರ್ವಕಾಲಿಕ ಏರಿಕೆಯಾಗಿದೆ ಎಂದರು. ನಿನ್ನೆ ಅರೇಬಿಕಾ ಪಾರ್ಚ್ಮೆಂಟ್ ಕಾಫಿ ದರ ಲಂಡನ್ ಮಾರುಕಟ್ಟೆಯಲ್ಲಿ ಒಂದು ಪೌಂಡ್ಗೆ ಅಮೇರಿಕನ್ ಡಾಲರ್ ಲೆಕ್ಕದಲ್ಲಿ ೯ ಸೆಂಟ್ಗಳಷ್ಟು ಏರಿಕೆ ಆಗಿದೆ. ಕಾಫಿ ಬೆಳೆಗಾರರು ಈ ದರವನ್ನು ಮೊಬೈಲ್ನಲ್ಲಿ ನೋಡಿ ಕೊಂಡು ಭಾರತೀಯ ರೂಪಾಯಿಗೆ ಪರಿವರ್ತಿಸಿ ದರ ಏರಿಕೆ ಲೆಕ್ಕ ಹಾಕಿಕೊಂಡು ಅಷ್ಟೇ ದರ ನೀಡಿ ಎಂದು ಕೇಳುತ್ತಾರೆ.
ಅಲ್ಲಿ ದರ ಏರಿಕೆ ಆಗಿದ್ದರೂ ವ್ಯಾಪಾರಿಗಳು ನೀಡದೆ ಮೋಸ ಮಾಡುತ್ತಾರೆ ಎಂದು ಆರೋಪಿಸು ತ್ತಾರೆ. ಆದರೆ ಭಾರತೀಯ ಕಾಫಿಗೆ ಪ್ರೀಮಿಯಂ ದರ ಇದ್ದು, ಅದನ್ನೂ ಪರಿಗಣಿಸಿ ದರ ನಿಗದಿ ಮಾಡಲಾಗು ತ್ತದೆ. ಈ ಪ್ರೀಮಿಯಂ ದರ ಮೈನಸ್ ಇರುವುದರಿಂದ ಅಷ್ಟೇ ದರ ಏರಿಕೆ ಆಗಿರುವುದಿಲ್ಲ. ಕೆಲವೊಮ್ಮೆ ಯೂರೋಪಿಯನ್ ಮಾರುಕಟ್ಟೆಯಲ್ಲಿ ದರ ಅಲ್ಪ ಕುಸಿದರೂ ಭಾರತೀಯ ಮಾರುಕಟ್ಟೆಯಲ್ಲಿ ದರ ಕುಸಿತ ಆಗಿಲ್ಲದಿರುವುದನ್ನೂ ಬೆಳೆಗಾರರು ಗಮನಿಸಬೇಕು ಎಂದರು. ದೇಶದ ಕಾಫಿ ಹೆಚ್ಚಾಗಿ ಮಧ್ಯ ಪ್ರಾಚ್ಯ ದೇಶಗಳಿಗೆ ರಫ್ತಾಗುತ್ತಿದ್ದು ಈಗ ದುಬೈ ಫೆಸ್ಟಿವಲ್ ನಡೆಯುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ ಎಂದರು.
ಕೊಡಗಿನ ಉತ್ಪಾದನಾ ಹೆಗ್ಗಳಿಕೆ
ಕಳೆದ ವರ್ಷ ಅರೇಬಿಕಾ ಪಾರ್ಚ್ಮೆಂಟ್ ಕಾಫಿ ದರ ೧೧ ಸಾವಿರ ರೂಪಾಯಿಗಳ ಆಸುಪಾಸಿನ ಲ್ಲಿದ್ದು ಈಗಿನ ದರಕ್ಕೆ ಹೋಲಿಸಿದರೆ ಶೇ. ೪೫ಕ್ಕೂ ಹೆಚ್ಚು ಏರಿಕೆ ದಾಖಲಾಗಿದೆ. ದೇಶದ ಒಟ್ಟು ಸರಾಸರಿ ಕಾಫಿ ಉತ್ಪಾದನೆ ವಾರ್ಷಿಕ ೩.೬ ಲಕ್ಷ ಟನ್ಗಳಷ್ಟಾಗಿದ್ದು, ಇದರಲ್ಲಿ ಅರೇಬಿಕಾ ಕಾಫಿಯ ಪಾಲು ಶೇಕಡಾ ೩೦ ರಷ್ಟು ಆಗಿದೆ. ಈ ಬಾರಿ ಅಕಾಲಿಕ ಮಳೆಯಿಂದ ಉತ್ಪಾದನೆಗೆ ಹೊಡೆತ ಬಿದ್ದಿದ್ದು, ಶೇ. ೩೦ ರಷ್ಟು ಫಸಲು ನಾಶವಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ಅಂದಾಜಿಸಿದ್ದಾರೆ.
ದೇಶದ ಕಾಫಿ ಉತ್ಪಾದನೆಯಲ್ಲಿ ರಾಜ್ಯದ ಕಾಫಿ ಉತ್ಪಾದನೆಯು ಸುಮಾರು ೨.೬ ಲಕ್ಷ ಟನ್ಗಳಷ್ಟಿದೆ. ಇದರಲ್ಲಿ ಅರೇಬಿಕಾ ಕಾಫಿಯ ಉತ್ಪಾದನೆ ೧.೦೫ ಲಕ್ಷ ಟನ್ಗಳಷ್ಟಿದ್ದು, ರೋಬಸ್ಟಾ ಪಾಲು ೧.೫೫ ಲಕ್ಷ ಟನ್ಗಳಷ್ಟಿದೆ. ಕೊಡಗಿನ ಒಟ್ಟು ಕಾಫಿ ಉತ್ಪಾದನೆ ವಾರ್ಷಿಕ ೧.೩ ಲಕ್ಷ ಟನ್ಗಳಷ್ಟಿದ್ದು, ಇದು ದೇಶದ ಒಟ್ಟು ಕಾಫಿ ಉತ್ಪಾದನೆಯ ಶೇ. ೩೦ಕ್ಕೂ ಅಧಿಕ ಆಗಿರುವುದು ಈ ಪುಟ್ಟ ಜಿಲ್ಲೆಯ ಹೆಗ್ಗಳಿಕೆ ಆಗಿದೆ. ಜಿಲ್ಲೆಯಲ್ಲಿ ೨೪ ಸಾವಿರ ಟನ್ಗಳಷ್ಟು ಅರೇಬಿಕಾ ಕಾಫಿ ಉತ್ಪಾದನೆ ಆಗುತ್ತಿದ್ದು, ರೊಬಸ್ಟಾ ಪಾಲು ಒಂದು ಲಕ್ಷ ಟನ್ಗಳಿಗೂ ಅಧಿಕವಾಗಿದೆ. ಸೋಮವಾರಪೇಟೆ ತಾಲೂಕು ದೇಶದಲ್ಲೇ ಅತ್ಯಂತ ಹೆಚ್ಚು ಅರೇಬಿಕಾ ಕಾಫಿ ಉತ್ಪಾದಿಸುವ ತಾಲೂಕಾಗಿ ಗುರುತಿಸಿಕೊಂಡಿದ್ದು, ಜಿಲ್ಲೆಯ ಶೇ. ೯೫ಕ್ಕೂ ಅಧಿಕ ಅರೇಬಿಕಾ ಕಾಫಿ ಉತ್ಪಾದನೆ ಈ ತಾಲೂಕಿನ ದ್ದಾಗಿದೆ. ಕಾಫಿಯ ದರವು ಅರೇಬಿಕಾ ಮಾದರಿಗೆ ಮಾತ್ರ ಹೆಚ್ಚಾಗಿದ್ದು ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಹೆಚ್ಚು ಫಸಲು ನಷ್ಟ ಅನುಭವಿಸಿದ್ದೂ ಅರೇಬಿಕಾ ಬೆಳೆಗಾರರೇ ಆಗಿದ್ದಾರೆ. ಇದೀಗ ಅರೇಬಿಕಾ ಮಾದರಿಗೆ ಮಾತ್ರ ದರ ಹೆಚ್ಚಾಗಿರುವುದು ಕಾಕತಾಳೀಯ.