ಶನಿವಾರಸಂತೆ, ಫೆ. ೧೦: ರೋಟರಿ ಸಮಾಜ ಸೇವೆ ಮಾಡುತ್ತಿರುವ ವಿಶ್ವದ ಅತಿ ದೊಡ್ಡ ಸೇವಾ ಸಂಸ್ಥೆಯಾಗಿದ್ದು, ವಿಶ್ವದಾದ್ಯಂತ ಲಕ್ಷಾಂತರ ಮಂದಿ ಸದಸ್ಯರು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಸೋಮವಾರಪೇಟೆ ರೋಟೇರಿಯನ್ ಪಿ. ನಾಗೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ವಿಘ್ನೇಶ್ವರ ಬಾಲಕಿಯರ ಪಿಯು ಕಾಲೇಜಿನಲ್ಲಿ ರೋಟರಿ ಸಂಸ್ಥೆ ವತಿಯಿಂದ ನಡೆದ ವಿದ್ಯಾರ್ಥಿನಿಯರ ರೋಟರಿ ಇಂರ್ಯಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಮನೋಭಾವನೆ, ನಾಯಕತ್ವದ ಗುಣ ಬೆಳೆಸಬೇಕೆಂಬ ಉದ್ದೇಶದಿಂದ ರೋಟರಿ ಸಂಸ್ಥೆ ಶಾಲಾ-ಕಾಲೇಜುಗಳಲ್ಲಿ ಇಂರ್ಯಾಕ್ಟ್ ಕ್ಲಬ್ಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಲ್ಲಿ ಸಮಾಜ ಸೇವೆಯ ಚಿಂತನೆ ಮೂಡಿಸುತ್ತಿದೆ ಎಂದರು.
ಪದಗ್ರಹಣ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಾದ ಹಂಪನಾ ಇಂರ್ಯಾಕ್ಟ್ ಕ್ಲಬ್ ಅಧ್ಯಕ್ಷೆಯಾಗಿ, ಸಹನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು. ರೋಟರಿ ಸಂಸ್ಥೆ ಅಧ್ಯಕ್ಷ ಹೆಚ್.ಪಿ. ಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯದರ್ಶಿ ಎಂ.ಎಸ್. ವಸಂತ್, ವಲಯ ಕಾರ್ಯದರ್ಶಿ ಹೆಚ್.ಎಸ್. ವಸಂತ್ ಕುಮಾರ್, ಸದಸ್ಯರಾದ ಕೆ.ಪಿ. ಜಯಕುಮಾರ್, ಸುದೀಪ್, ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಇತರರು ಹಾಜರಿದ್ದರು.