ಮಡಿಕೇರಿ, ಫೆ. 11: ಮಡಿಕೇರಿ ನಗರಸಭೆ ವ್ಯಾಪ್ತಿಯ ಖಾಸಗಿ ಬಸ್ ನಿಲ್ದಾಣ ಆವರಣದಲ್ಲಿ ಹೊಸದಾಗಿ ರೂ. 20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಉದ್ಯಾನವನವನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉದ್ಘಾಟಿಸಿದರು. 2020-21ನೇ ಸಾಲಿನ ಹಣಕಾಸು ಆಯೋಗದ ಅನುದಾನದಡಿ ನಿರ್ಮಿಸಲಾಗಿರುವ ಉದ್ಯಾನವನ ಉದ್ಘಾಟಿಸಿದ ಬಳಿಕ ಮಾತನಾಡಿದ ಶಾಸಕರು, ನಗರದ ಎಲ್ಲೆಡೆ ಹೆಚ್ಚಿನ ಮರಗಿಡ ಬೆಳೆಸಿ, ಹಸಿರೀಕರಣ ಮಾಡುವಂತಾಗಬೇಕು ಎಂದು ಸಲಹೆ ನೀಡಿದರು.
ಬಳಿಕ ಖಾಸಗಿ ಬಸ್ ನಿಲ್ದಾಣದ ಬಳಿ ನಿರ್ಮಾಣವಾಗುತ್ತಿರುವ ಮಳಿಗೆ ಕಾಮಗಾರಿ ವೀಕ್ಷಿಸಿದರು. ನಂತರ ವಾಹನ ನಿಲುಗಡೆಗೆ ಗುರುತಿಸಲಾಗಿರುವ ಸ್ಥಳ ಪರಿಶೀಲಿಸಿದರು. ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ತಹಶೀಲ್ದಾರ್ ಪಿ.ಎಸ್. ಮಹೇಶ್, ಪೌರಾಯುಕ್ತ ಎಸ್.ವಿ. ರಾಮದಾಸ್, ನಗರಸಭೆ ಸದಸ್ಯರು ಇದ್ದರು.