ಸೋಮವಾರಪೇಟೆ, ಫೆ. ೯ : ಸುಳ್ಯದಲ್ಲಿ ನಿನ್ನೆ ದಿನ ನಡೆದ ಕಾರು ಅವಘಡದಲ್ಲಿ ತಾಲೂಕಿನ ಯುವಕ ಹಾಗೂ ಯುವತಿಯೋರ್ವಳು ಪ್ರಾಣಾಪಾಯದಿಂದ ಪಾರಾದ ಘಟನೆ ವರದಿಯಾಗಿದೆ.
ಸೋಮವಾರಪೇಟೆ ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೀಟಿಕಟ್ಟೆ ಹಾರಳ್ಳಿಯ ಯುವತಿ ಮೇಘ ಹಾಗೂ ಶನಿವಾರಸಂತೆ ನಿಡ್ತ ಸಮೀಪದ ಹಾರೆಹೊಸೂರು ಗ್ರಾಮದ ಯುವಕ ಮಹಮ್ಮದ್ ನಾಸಿರ್ ಎಂಬವರುಗಳೇ ಜೀವಾಪಾಯದಿಂದ ಪಾರಾದವರು.
ನಿನ್ನೆ ದಿನ ಕೇರಳದ ಬಂದಡ್ಕ ಕಡೆಯಿಂದ ಸುಳ್ಯದ ಆಲೆಟ್ಟಿ ಮಾರ್ಗವಾಗಿ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಧರ್ಮದ ಯುವತಿ ಕಾರಿನಲ್ಲಿ ತೆರಳುತ್ತಿರುವ ಬಗ್ಗೆ ಮಾಹಿತಿ ಪಡೆದ ಸುಳ್ಯದ ಹಿಂದೂಪರ ಸಂಘಟನೆಗಳ ಕೆಲ ಯುವಕರು, ಕಾರನ್ನು ಕೊಲ್ಚಾರು ಬಳಿ ಅಡ್ಡಗಟ್ಟಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಆದರೆ ಸ್ಥಳದಲ್ಲಿ ಕಾರನ್ನು ನಿಲ್ಲಿಸದೇ ನಾರ್ಕೋಡು ಮಾರ್ಗದಲ್ಲಿ ಅತೀ ವೇಗವಾಗಿ ಮುಂದಕ್ಕೆ ಚಾಲಿಸಿದ್ದು, ಸುಳ್ಯ ಪಟ್ಟಣ ಸಮೀಪದ ನಾಗಪಟ್ಟಣದ ಬಳಿ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ ಘಟನೆಯಿಂದ ಕಾರು ನಜ್ಜುಗುಜ್ಜಾಗಿದ್ದರೂ ಅದೃಷ್ಟವಶಾತ್ ಕಾರಿನಲ್ಲಿದ್ದ ಯುವಕ ಹಾಗೂ ಯುವತಿ ಪಾರಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯರು ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು, ಯುವಕ ಹಾಗೂ ಯುವತಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ.
ಘಟನೆಯ ಬಗ್ಗೆ ಯುವತಿ ಸುಳ್ಯ ಪೊಲೀಸರಿಗೆ ದೂರು ನೀಡಿದ್ದು, ಕೊಲ್ಚಾರು ಬಳಿಯಲ್ಲಿ ಕಾರನ್ನು ಅಡ್ಡಗಟ್ಟಿದ ಕೆಲವರು ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಠಾಣಾಧಿಕಾರಿ ದಿಲೀಪ್ ಅವರು ತನಿಖೆ ಕೈಗೊಂಡಿದ್ದಾರೆ.