ಚೆಟ್ಟಳ್ಳಿ, ಫೆ. ೯: ಆರೋಗ್ಯದ ಕುರಿತು ನಮಗಿರುವಷ್ಟು ಕಾಳಜಿ ದಂತದ ಬಗ್ಗೆಯು ಇರಬೇಕು, ಏಕೆಂದರೆ ಮಾನವನಿಗೆ ದಂತವು ಬಹಳ ಮುಖ್ಯವಾದದ್ದು ಎಂದು ಡಾ. ಜಿತೇಶ್ ಹೇಳಿದರು.
ವೀರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿನ ಐಕ್ಯೂಎಸಿ, ವಿದ್ಯಾರ್ಥಿ ಭ್ರಾತೃತ್ವ ವೇದಿಕೆ ಮತ್ತು ಡೆಂಟಲ್ ಕಾಲೇಜಿನ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿದ್ದ ಉಚಿತ ದಂತ ತಪಾಸಣಾ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಡೆಂಟಲ್ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಜಿತೇಶ್ ಮಾತನಾಡಿದರು. ಹಲ್ಲಿನ ಬಗ್ಗೆ ಇರುವ ತಾತ್ಸಾರ ಭಾವ ದೂರವಾಗ ಬೇಕು. ನಮ್ಮ ಹಲ್ಲುಗಳು ಬದುಕಿನ ಬಹುಮುಖ್ಯ ಆಗಿರುವುದರಿಂದ ಅದರ ಬಗ್ಗೆ ಅರಿವು ಮತ್ತು ಎಚ್ಚರ ವಹಿಸಬೇಕಾಗಿರುವುದು ನಮ್ಮ ಜವಾಬ್ದಾರಿ ಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರಿ ಕಾಲೇಜಿನ ಪ್ರಯತ್ನ ಶ್ಲಾಘನೀಯ ಎಂದು ಅಭಿಪ್ರಾಯಿಸಿದರು. ಇದಕ್ಕೂ ಮುನ್ನ ಶಿಬಿರವನ್ನು ಉದ್ಘಾಟಿಸಿದ ವೀರಾಜಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ವಿನಾಂಕ್ ಕುಟ್ಟಪ್ಪ ಅವರು ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಹೆಚ್.ಎಸ್. ವೇಣುಗೋಪಾಲ್ ಮಾತನಾಡಿ, ಪಾನ್ ಮಸಾಲ, ಗುಟ್ಕಾದಂತ ಕೆಟ್ಟ ಹವ್ಯಾಸಗಳಿಗೆ ಬಲಿಯಾಗುತ್ತಿರುವುದು ವಿಪರ್ಯಾಸ. ವಿದ್ಯಾರ್ಥಿಗಳು ಇದರಿಂದ ಮುಕ್ತರಾಗಿ ಉತ್ತಮ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಕಲಾ ವಿಭಾಗದ ಡೀನ್ ಡಾ. ಬಿ.ಎಸ್. ಶಿವಕುಮಾರಸ್ವಾಮಿ ಹಾಗೂ ಎಸ್.ಎಫ್.ಸಿ.ಯ ಉಪಾಧ್ಯಕ್ಷ ಪಿ.ಎನ್. ನಾಗರಾಜು ಮೂರ್ತಿ ಉಪಸ್ಥಿತರಿದ್ದರು.
ಶಿಬಿರದ ಉದ್ಘಾಟನೆಯ ನಂತರ ಸುಮಾರು ೨೫೦ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ದಂತ ತಪಾಸಣೆಯನ್ನು ನಡೆಸಲಾಯಿತು. ಶಿಬಿರದ ಸದುಪಯೋಗವನ್ನು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿಗಳು ಪಡೆದುಕೊಂಡರು.