ಮಡಿಕೇರಿ, ಫೆ.೧೦; ಭೂಗರ್ಭದೊಳಗಡಗಿರುವ ಬೆಲೆಬಾಳುವ ಹರಳು ಕಲ್ಲು ನಿಕ್ಷೇಪಗಳನ್ನು ಬಗೆದು ಅರಣ್ಯ ಸಂಪತ್ತನ್ನು ಲೂಟಿ ಮಾಡುತ್ತಿರುವ ಅಕ್ರಮ ದಂಧೆಯ ಜಾಲ ಕೊಡಗು ಜಿಲ್ಲೆಯಲ್ಲಿ ವಿಸ್ತರಿಸಿಕೊಂಡಿದ್ದು, ಆಗಾಗ್ಗೆ ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇದೆ. ತಿಂಗಳ ಹಿಂದೆಯಷ್ಟೇ ಭಾಗಮಂಡಲ ವಲಯದ ತೊಡಿಕಾನ ಉಪ ವಲಯದ ಪಟ್ಟಿಘಾಟ್ ಮೀಸಲು ಅರಣ್ಯದ ನಿಶಾನೆ ಮೊಟ್ಟೆಯಲ್ಲಿ ಹರಳು ಕಲ್ಲು ಗಣಿಗಾರಿಕೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದ್ದು, ಪ್ರಕರಣ ತನಿಖೆಯ ಹಾದಿಯಲ್ಲಿರುವಾಗಲೇ ಕಳ್ಳರ ಜಾಡು ಹಿಡಿದು ಬೇಟೆಯಾಡಿರುವ ಅರಣ್ಯ ಇಲಾಖಾಧಿಕಾರಿಗಳು ಓರ್ವನನ್ನು ಬಂಧಿಸಿ ಹರಳು ಕಲ್ಲನ್ನು ವಶಪಡಿಸಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಸಿ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದ

(ಮೊದಲ ಪುಟದಿಂದ) ಹರಳು ಕಲ್ಲನ್ನು ಅಧಿಕಾರಿಗಳು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಮೇಕೇರಿ ನಿವಾಸಿ ಎಂ.ಜಿ. ಖಾಸಿಂ ಎಂಬವರ ಪುತ್ರ, ಮೇಕೇರಿ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಸಲೀಂ ಬಂಧಿತ ಆರೋಪಿ. ೨೦೨೦ರಲ್ಲಿ ಕೂಡ ಸಲೀಂನನ್ನು ಬಂಧಿಸಿ ಆತನಿಂದ ೩ ಕೆಜಿಯಷ್ಟು ಹರಳು ಕಲ್ಲನ್ನು ವಶಪಡಿಸಿಕೊಳ್ಳಲಾಗಿತ್ತು. ಆದರೆ, ಅರಣ್ಯಾಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸದ್ದರಿಂದ ಯಾವದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಸಲೀಂ ಬಂಧನಕ್ಕೊಳಗಾಗಿದ್ದು, ಆತನ ಬಳಿಯಿದ್ದ ೨.೬೦೦ ಕೆಜಿ ಹರಳು ಕಲ್ಲನ್ನು ವಶ ಪಡಿಸಿಕೊಳ್ಳಲಾಗಿದೆ.

ವ್ಯಾಪಾರದ ಸೋಗಿನಲ್ಲಿ ಬೇಟೆ..!

ನಿಶಾನೆ ಮೊಟ್ಟೆಯಲ್ಲಿ ಮತ್ತೆ ಹರಳು ಕಲ್ಲು ದಂಧೆ ನಡೆದ ಬಳಿಕ ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಂಡಿರುವ ಅಧಿಕಾರಿಗಳಿಗೆ ಸಲೀಂ ಕೂಡ ದಂಧೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಹರಳು ಕಲ್ಲು ಗಣಿಗಾರಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ ಸಲೀಂ ಬಳಿ ಕಲ್ಲು ಇರುವ ಬಗ್ಗೆ ಖಾತರಿಪಡಿಸಿಕೊಂಡ ಅಧಿಕಾರಿಗಳು ಆತನ ಬಳಿಯಿಂದ ಕಲ್ಲು ಖರೀದಿ ಮಾಡುವ ನೆಪದಲ್ಲಿ ವ್ಯಾಪಾರಿಗಳ ಸೋಗಿನಲ್ಲಿ ಬಲೆ ಬೀಸಿದ್ದಾರೆ. ಮಾತುಕತೆ ನಡೆಸಿದ ನಂತರ ಮೇಕೇರಿಯ ಆತನ ಮನೆಗೆ ದಾಳಿ ಮಾಡಿ ಸೆರೆ ಹಿಡಿದಿದ್ದಾರೆ. ಆತನ ಬಳಿಯಿದ್ದ ೨ಕೆಜಿಯಷ್ಟು ದೊಡ್ಡ ಗಾತ್ರದ ಹಾಗೂ ೬೦೦ ಗ್ರಾಂನಷ್ಟು ಸಣ್ಣ ಗಾತ್ರದ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಸಲೀಂನನ್ನು ವಿಚಾರಣೆಗೊಳಪಡಿಸಿ, ಮೊಕದ್ದಮೆ ದಾಖಲಿಸಿ ನ್ಯಾಯಾಂಗ ವಶಕ್ಕೊಪ್ಪಿಸಲಾಗಿದೆ.

ಉಪ ಸಂರಕ್ಷಣಾಧಿಕಾರಿ ಅಜ್ಜಿಕುಟ್ಟಿರ ಪೂವಯ್ಯ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮೊಯಿಸಿನ್ ಪಾಷ, ಭಾಗಮಂಡಲ ವಲಯ ಅರಣ್ಯಾಧಿಕಾರಿ ದೇವರಾಜು, ಮಂಜುನಾಥ್ ಒಡೆಯರ್, ರಕ್ಷಕರುಗಳಾದ ಮಲ್ಲಿಕಾರ್ಜುನ, ರಫೀಕ್, ರಾಥೋಡ್, ಅರಣ್ಯ ಸಂಚಾರಿ ದಳದ ಸಹಾಯಕ ಸಂರಕ್ಷಣಾಧಿಕಾರಿ ಗಳಾದ ಶ್ರೀನಿವಾಸ್ ನಾಯಕ್, ಮಂಜುನಾಥ್ ನಾಯಕ್, ಮಂಜುನಾಥ್ ದುಲೆ, ಸಿಬ್ಬಂದಿ ಚೇತನ್ ಇನ್ನಿತರರು ಪಾಲ್ಗೊಂಡಿದ್ದರು. ?ಸಂತೋಷ್, ಸುನಿಲ್