ಸಿದ್ದಾಪುರ, ಫೆ. ೧೦: ಸಂಸದ ಪ್ರತಾಪ್ ಸಿಂಹ ಅವರು ಸಂವಿಧಾನ ವಿರೋಧಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಎಸ್ ಡಿ ಪಿ ಐ ಪಕ್ಷದ ಕಾರ್ಯಕರ್ತರು ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಕಾರ್ಯಕರ್ತರು ಸಂಸದ ಪ್ರತಾಪ್ ಸಿಂಹ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿದರು. ಜಿಲ್ಲಾ ಸಮಿತಿ ಸದಸ್ಯ ಎ.ಎಸ್ ಮುಸ್ತಫ ಮಾತನಾಡಿ, ಕೊಡಗು ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ವನ್ಯ ಪ್ರಾಣಿಗಳ ಹಾವಳಿ, ಮಲ್ಟಿ ಸ್ಪೆಷಲ್ ಆಸ್ಪತ್ರೆ, ಬೆಳೆಗಾರರ ಸಮಸ್ಯೆ, ಗುಂಡಿ ಬಿದ್ದಿರುವ ರಸ್ತೆಗಳು ಸೇರಿದಂತೆ ಅಭಿವೃದ್ಧಿ ವಿಚಾರದಲ್ಲಿ ಮಾತನಾಡದ ಸಂಸದರು ಕೇವಲ ಕೋಮು ವಿಷ ಬೀಜ ಬಿತ್ತಲು ಮಾತ್ರ ಕೊಡಗಿಗೆ ಆಗಮಿಸುತ್ತಾರೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಕೋಶಾಧಿಕಾರಿ ಸಂಶೀರ್ ನೆಲ್ಯಹುದಿಕೇರಿ, ಸಲಾಂ ಸಿದ್ದಾಪುರ, ಹಮೀದ್ ತ್ಯಾಗತ್ತೂರು, ರಾಶಿದ್ ನಲ್ವತೇಕ್ರೆ, ಶೌಕತ್ ಸೇರಿದಂತೆ ಮತ್ತಿತರರು ಇದ್ದರು.