ಶನಿವಾರಸಂತೆ, ಫೆ. ೯: ಸಮೀಪದ ಶೆಟ್ಟಿಗನಹಳ್ಳಿ ಗ್ರಾಮಸ್ಥರು ಎಮ್ಮೆಗುಂಡಿ ಗೋಮಾಳವೆಂದು ಪೈಸಾರಿ ಜಾಗದಲ್ಲಿ ನಿರ್ಮಿಸಿದ್ದ ಬೇಲಿಯನ್ನು ಬುಧವಾರ ತಹಶೀಲ್ದಾರ್ ಗೋವಿಂದ್ ರಾಜ್ ಹಾಗೂ ಸಿಬ್ಬಂದಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಜೆಸಿಬಿ ಸಹಾಯದಿಂದ ತೆರವುಗೊಳಿಸುತ್ತಿದ್ದಂತೆ ಗ್ರಾಮಸ್ಥರು ಜಾಗದ ಬೇಲಿ ಉಳಿಸಲು ಹರಸಾಹಸ ಪಡುತ್ತಿದ್ದರು. ಈ ಸಂದರ್ಭ ಸೋಮವಾರಪೇಟೆ ಕೋರ್ಟ್ನಿಂದ ತಡೆಯಾಜ್ಞೆ ತಂದು ಯಥಾಸ್ಥಿತಿ ಕಾಪಾಡುವಂತೆ ಆದೇಶವನ್ನು ವಕೀಲ ಮನೋಹರ್ ತಹಶೀಲ್ದಾರ್‌ಗೆ ತೋರಿಸಿದರು.

ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಪಶೆಟ್ಟಳ್ಳಿ ಮತ್ತು ಶೆಟ್ಟಿಗನಹಳ್ಳಿ ಉಪಗ್ರಾಮಗಳಾಗಿವೆ. ಮುಖ್ಯ ರಸ್ತೆಯ ೨ ಬದಿಗಳಲ್ಲಿ ಗ್ರಾಮಗಳಿದ್ದು, ಮಧ್ಯದ ಜಾಗದಲ್ಲಿ ೨ ಎಕರೆ ಜಾಗ ಪೈಸಾರಿ ಜಾಗವಿದೆ. ಕ್ರೀಡಾ ಮೈದಾನವೆಂದು ಅಪ್ಪಶೆಟ್ಟಳ್ಳಿ ಗ್ರಾಮದವರು ಹಾಗೂ ಗೋಮಾಳವೆಂದು ಶೆಟ್ಟಿಗನಹಳ್ಳಿ ಗ್ರಾಮಸ್ಥರ ನಡುವೆ ಜಾಗದ ಬಗ್ಗೆ ಸಂಘರ್ಷ ಏರ್ಪಟ್ಟಿತ್ತು.

ತಾ. ೧ ರಂದು ಕಂದಾಯ ಇಲಾಖೆಯವರು ಪೊಲೀಸರ ಸಹಕಾರದೊಂದಿಗೆ ಬೇಲಿ ತೆರವುಗೊಳಿಸಲು ಬಂದಾಗಲೂ ಶೆಟ್ಟಿಗನಹಳ್ಳಿ ಗ್ರಾಮಸ್ಥರು ಬೇಲಿಗೆ ಅಡ್ಡಲಾಗಿ ನಿಂತು ಸಂಜೆಯವರೆಗೂ ಕದಲದೆ ವಿರೋಧಿಸಿದ್ದರು. ಅಪ್ಪಶೆಟ್ಟಳ್ಳಿ ಗ್ರಾಮಸ್ಥರು ಕ್ರೀಡಾ ಮೈದಾನದ ಸುತ್ತ ಹಾಕಿರುವ ಬೇಲಿಯನ್ನು ತೆರವುಗೊಳಿಸಿ ಕ್ರೀಡಾ ಮೈದಾನವನ್ನು ಉಳಿಸಿಕೊಡುವಂತೆ ಗ್ರಾಮ ಪಂಚಾಯಿತಿಗೆ ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದುದನ್ನು ತಿಳಿದು ಶೆಟ್ಟಿಗನಹಳ್ಳಿ ಗ್ರಾಮಸ್ಥರು ತಡೆಯಾಜ್ಞೆ ಕೋರಿ ತಾ. ೮ ರಂದು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಬುಧವಾರ ಸಂಜೆ ಕೋರ್ಟ್ನಿಂದ ತಡೆಯಾಜ್ಞೆ ಆದೇಶ ತಂದ ವಕೀಲ ಮನೋಹರ್ ಮಾತನಾಡಿ, ತಹಶೀಲ್ದಾರ್ ಅವರಿಗೆ ತಡೆಯಾಜ್ಞೆ ವಿಷಯ ತಿಳಿಸಿ ಅರ್ಧ ಗಂಟೆ ಸಮಯಾವಕಾಶ ಕೋರಿದರೂ, ನ್ಯಾಯಾಲಯದ ಘನತೆಗೆ ಚ್ಯುತಿ ಉಂಟಾಗುವAತೆ ವರ್ತಿಸಿ, ಏಕಾಏಕಿ ಜೆಸಿಬಿ ತರಿಸಿ ಬೇಲಿಯನ್ನು ಧ್ವಂಸಗೊಳಿಸಿದರು. ಬೇಲಿ ತೆರವಿನ ಆದೇಶ ನೀಡುವಂತೆ ಮನವಿ ಮಾಡಿದರೂ ಮನ್ನಣೆ ಕೊಡದೇ ಏಕಪಕ್ಷೀಯವಾಗಿ ವರ್ತಿಸಿದ್ದು ಖಂಡನೀಯ ಎಂದರು.

ಅಷ್ಟರಲ್ಲಿ ಬೇಲಿ ತೆರವುಗೊಳಿಸಿದ್ದ ತಹಶೀಲ್ದಾರ್ ಗೋವಿಂದ್ ರಾಜ್, ಕಂದಾಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಿಬ್ಬಂದಿ ಹಾಗೂ ಡಿ.ಎಆರ್. ಸ್ಥಳದಿಂದ ತೆರಳಿದ್ದರು. ಕೋರ್ಟ್ ತಡೆಯಾಜ್ಞೆ ಆದೇಶ ದೊರೆತ ತಕ್ಷಣ ಶೆಟ್ಟಿಗನಹಳ್ಳಿಯ ಆಕ್ರೋಶಭರಿತ ಪುರುಷ-ಮಹಿಳಾ ಗ್ರಾಮಸ್ಥರು ಪುನಃ ಬೇಲಿ ನಿರ್ಮಿಸತೊಡಗಿದರು.