(ವಿಶೇಷ ವರದಿ: ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಫೆ. ೧೦: ಸರಿಸುಮಾರು ೩೦ ವರ್ಷಗಳ ಹಿಂದೆ ೨೦ಕ್ಕೂ ಅಧಿಕ ಗಿರಿಜನರು ತಮ್ಮ ಜೀವನ ನಿರ್ವಹಣೆಗೆ ದಕ್ಷಿಣ ಕೊಡಗಿನ ಕೆ. ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಈಚುಮಾಡು ಪೈಸಾರಿ ಜಾಗದಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದರು.
ವರ್ಷಗಳು ಕಳೆದಂತೆ ಇಲ್ಲಿ ವಾಸವಿದ್ದ ಪೈಸಾರಿ ನಿವಾಸಿಗಳಿಗೆ ಸರ್ಕಾರ ಮನೆ ಮಂಜೂರು ಮಾಡಿ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಿತ್ತು.
ಕೋಟ್ಯಂತರ ವೆಚ್ಚದಲ್ಲಿ ಪೈಸಾರಿ ಜಾಗಕ್ಕೆ ತೆರಳಲು ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು. ಕುಡಿಯುವ ನೀರು ಸೇರಿದಂತೆ ವಿದ್ಯುತ್ ಪೂರೈಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ವರ್ಷಗಳಲ್ಲಿ ಸುತ್ತಮುತ್ತಲಿನ ಪ್ರಭಾವಿ ವ್ಯಕ್ತಿಗಳ ನಿರಂತರ ಕಿರುಕುಳದಿಂದ ಇಲ್ಲಿದ್ದ ಕುಟುಂಬಗಳು ಅಲ್ಲಿಂದ ಪಲಾಯನ ಮಾಡಿದ್ದಾರೆ.
ಅವರಿಗಾಗಿಯೇ ಮೀಸಲಿಟ್ಟ ಸುಮಾರು ೧೮ ಎಕರೆ ವಿಸ್ತೀರ್ಣದ ಜಾಗವು ಇದೀಗ ಉಳ್ಳವರ ಪಾಲಾಗಿದ್ದು ಕಾಫಿ ತೋಟಗಳಾಗಿ ಮಾರ್ಪಟ್ಟಿವೆ. ಈ ಬಗ್ಗೆ ಗಿರಿಜನರ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಸ್ತುಸ್ಥಿತಿಯ ವರದಿಯನ್ನು ಸಂಬAಧಿಸಿದ ಇಲಾಖೆಯ ಗಮನಕ್ಕೆ ತಂದಿದ್ದಾರೆ.
ಗಿರಿಜನರ ಏಳಿಗೆಗಾಗಿ ಮೀಸಲಿಟ್ಟ ಸುಮಾರು ೧೮ ಎಕರೆ ಪೈಸಾರಿ ಜಾಗವನ್ನು ಸರ್ವೆ ಕಾರ್ಯ ನಡೆಸುವಂತೆ ಪೊನ್ನಂಪೇಟೆ ತಹಶೀಲ್ದಾರ್ ಆಗಿದ್ದ ಯೋಗಾನಂದ್ ಅವರು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ೨೦೨೧ರ ಸೆಪ್ಟೆಂಬರ್ ತಿಂಗಳಿನಲ್ಲಿ ಸೂಚನೆ ನೀಡಿದ್ದರೂ ಸರ್ವೆ ಇಲಾಖೆಯ ಅಧಿಕಾರಿಗಳುಮಾತ್ರ ಮೌನ ವಹಿಸಿದ್ದಾರೆ. ಇದು ಪ್ರಶ್ನೆಗೆ ಕಾರಣವಾಗಿದೆ.
ಬಡವರಿಗೆ ನಿವೇಶನವಾಗಲಿ
ಹೇರ್ಮಾಡು ಈಶ್ವರ ದೇವಸ್ಥಾನ ಹಿಂಭಾಗ ಬರುವ ಈ ಜಾಗವು ಹಿಂದೆ ಬಡವರಿಗೆ ಮನೆ ನಿರ್ಮಿಸಲು ಕಾಯ್ದಿರಿಸಲಾಗಿತ್ತು. ಅಲ್ಲದೆ ಗಿರಿಜನರ ಹೆಸರಿನಲ್ಲಿ ಕೋಟ್ಯಂತರ ಹಣವನ್ನು ವ್ಯಯಮಾಡಿ ರಸ್ತೆ, ವಿದ್ಯುತ್, ಮನೆ ನಿರ್ಮಾಣ ಮಾಡಲಾಗಿದೆ. ಸರ್ಕಾರದಿಂದ ನಿರ್ಮಾಣವಾದ ಮನೆಗಳು ಇದೀಗ ಶಿಥಿಲಗೊಂಡಿವೆ. ಈ ಜಾಗವು ಅರ್ಹ ಬಡವರಿಗೆ ಸಿಗಬೇಕು, ಜಾಗವನ್ನು ಸರ್ವೆ ಕಾರ್ಯ ನಡೆಸಿ, ಸರ್ಕಾರದ ವಶಕ್ಕೆ ಪಡೆಯಲಿ ನಂತರ ನಿವೇಶನ ರಹಿತರಿಗೆ ಹಂಚಿಕೆ ಮಾಡಲಿ ಎಂದು ಸ್ಥಳೀಯ ಬೆಳೆಗಾರ ಮಧು ಆಗ್ರಹಿಸಿದ್ದಾರೆ.