ಮಡಿಕೇರಿ, ಫೆ. ೯: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಬರುವ ಸ್ವತ್ತಿನ ಆಸ್ತಿ ತೆರಿಗೆ, ನೀರಿನ ತೆರಿಗೆ, ನಗರಸಭೆ ಮಳಿಗೆಗಳ ಮಾಸಿಕ ಬಾಡಿಗೆ, ಜಾಹೀರಾತು ಫಲಕದ ಶುಲ್ಕಗಳನ್ನು ಪಾವತಿಸದೆ ಬಾಕಿ ಇಟ್ಟುಕೊಂಡಿರುವವರು ಹಿಂದಿನ ಬಾಕಿ ಸೇರಿದಂತೆ ಕೂಡಲೇ ನಗರಸಭೆಗೆ ಬಂದು ಆನ್‌ಲೈನ್ ಚಲನ್ ಪಡೆದು ಪಾವತಿಸಿ ಸ್ವೀಕೃತಿ ಪಡೆಯುವುದು. ತಪ್ಪಿದಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ ರಲ್ಲಿ ದತ್ತವಾದ ಅಧಿಕಾರದಂತೆ ಇದನ್ನೇ ಅಂತಿಮ ಸೂಚನೆ ಎಂದು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ. ನೀರಿನ ತೆರಿಗೆ ಚಾಲ್ತಿ ವರ್ಷದ ಬಾಕಿ ಇದ್ದರೂ ಪಾವತಿ ಮಾಡದೆ ಇದ್ದಲ್ಲಿ ಯಾವುದೇ ಸೂಚನೆ ನೀಡದೆಯೇ ನಲ್ಲಿ ಸಂಪರ್ಕ ಕಡಿತಗೊಳಿಸಲಾಗುವುದು. ಆಸ್ತಿ ತೆರಿಗೆ ಪಾವತಿ ಮಾಡದೆ ಬಾಕಿ ಇಟ್ಟುಕೊಂಡಲ್ಲಿ ಮುನ್ಸಿಪಲ್ ಕಾಯಿದೆ ಕಲಂ ೧೪೨(೩) ರಂತೆ ಕ್ರಮ ಇಡಲಾಗುವುದು. ಮಳಿಗೆ ಬಾಡಿಗೆ ಬಾಕಿ ಇದ್ದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಮಳಿಗೆ ಮುಚ್ಚಲು ಕ್ರಮ ವಹಿಸಲಾಗುವುದು. ಜಾಹೀರಾತು ಫಲಕಗಳ ಶುಲ್ಕ ಪಾವತಿ ಮಾಡದೇ ಇದ್ದಲ್ಲಿ ತೆರವುಗೊಳಿಸಲಾಗುವುದು ಎಂದು ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್ ತಿಳಿಸಿದ್ದಾರೆ.