ಗೋಣಿಕೊಪ್ಪಲು, ಫೆ. ೮: ಕಳೆದ ಆಗಸ್ಟ್ ತಿಂಗಳಿನಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಗೋಣಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ.
ತಾ. ೦೫/೦೮/೨೦೨೧ ರಂದು ಗೋಣಿಕೊಪ್ಪ ಠಾಣಾ ವ್ಯಾಪ್ತಿಯ ಅತ್ತೂರು ಗ್ರಾಮದ ಕೆ.ಎಸ್.ಮಾಚಯ್ಯ ಎಂಬವರು ಮನೆಗೆ ಬೀಗ ಹಾಕಿ ಅಮ್ಮತ್ತಿಯ ತಮ್ಮ ಕಾಫಿ ತೋಟಕ್ಕೆ ಹೋಗಿದ್ದ ಸಂದರ್ಭ ಮನೆಯ ಹೆಂಚು ತೆಗೆದು ಗಾಡ್ರೇಜ್‌ನಲ್ಲಿದ್ದ ೫೦ ಸಾವಿರ ನಗದು ಮತ್ತು ಚಿನ್ನಾಭರಣ ಗಳನ್ನು ಕಳ್ಳರು ದೋಚಿದ್ದರು ಎಂದು ಪ್ರಕರಣ ದಾಖಲಾಗಿತ್ತು.
ತನಿಖೆ ಕೈಗೊಂಡ ಗೋಣಿಕೊಪ್ಪ ಪೊಲೀಸರು ಮೂಲತಃ ಪಿರಿಯಾಪಟ್ಟಣ ಸಮೀಪದ ಗುಡ್ಡೇನಹಳ್ಳಿಯ ನಿವಾಸಿ ಆನಂದ (೩೭), ಮಡಿಕೇರಿಯ ಪುಟಾಣಿ ನಗರ ನಿವಾಸಿ ಶಿವಕುಮಾರ್ (೩೮), ಹಾಸನ ಜಿಲ್ಲೆಯ ಹುಣಸೆವಳ್ಳಿಯ ಗೋಪಾಲ (೪೮) ಎಂಬ ಆರೋಪಿಗಳನ್ನು ಬಂಧಿಸಿ ೩ ಚಿನ್ನದ ನಾಣ್ಯಗಳು, ಒಂದು ಚಿನ್ನದ ಸರ, ೬ ಬೆಳ್ಳಿಯ ನಾಣ್ಯಗಳು ಸೇರಿ ಒಟ್ಟು ೧೬ ಗ್ರಾಂ ಚಿನ್ನಾಭರಣ, ೩೦ ಗ್ರಾಂ ಬೆಳ್ಳಿ ಹಾಗೂ ರೂ.೧,೬೦೦ ರೂ ನಗದು ಹಣ ಸೇರಿ ಒಟ್ಟು ರೂ.೭೬,೬೦೦ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
‘ಫಿಂಗರ್ ಪ್ರಿಂಟ್’ ಸುಳಿವು
ಪ್ರಕರಣದ ಆರೋಪಿಗಳ ಪೈಕಿ ಮೊದಲ ಆರೋಪಿ ಆನಂದನ ‘ಫಿಂಗರ್ ಪ್ರಿಂಟ್’ನಿAದ ಕಳ್ಳರ ಗುಂಪಿನ ಸುಳಿವು ದೊರೆಯಿತು. ಆನಂದ್ ಹಲವು ಜಿಲ್ಲೆಗಳಲ್ಲಿ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ೨೦೦೬ರಲ್ಲಿ ವೀರಾಜಪೇಟೆಯ ಮನೆಯೊಂದರಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಈತನನ್ನು ಬಂಧಿಸ ಲಾಗಿತ್ತು. ಆ ಸಂದರ್ಭ ಆನಂದ್‌ನ ‘ಫಿಂಗರ್ ಪ್ರಿಂಟ್’ ತೆಗೆದು ಕೊಳ್ಳಲಾಗಿತ್ತು.
ಕಳೆದ ಆಗಸ್ಟ್ನಲ್ಲಿ ಅತ್ತೂರಿನಲ್ಲಿ ನಡೆದ ಕಳ್ಳತನ ಪ್ರಕರಣದ ಫಿಂಗರ್ ಪ್ರಿಂಟ್ ತಾಳೆ ಮಾಡಿದಾಗ ಇದು ಆನಂದ್ ಕೈ ರೇಖೆಗೆ ಹೋಲಿಕೆ ಯಾಗಿದೆ. ತಕ್ಷಣ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ. ೬-೭ ಮೊಬೈಲ್ ಬದಲಿಸಿದ್ದ ಹಿನ್ನೆಲೆ ಆರೋಪಿಯ ಸುಳಿವು ಲಭ್ಯವಾಗುತ್ತಿ ರಲಿಲ್ಲ. ತಾ. ೭ ರಂದು ಕೇರಳದಲ್ಲಿ ಬಂಧಿಸಿ ವಿಚಾರಣೆ ನಡೆಸಿದಾಗ ನೈಜಾಂಶ ಬಯಲಾಗಿ ಇತರ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ವೀರಾಜಪೇಟೆ ಉಪವಿಭಾಗ ಡಿ.ವೈ.ಎಸ್.ಪಿ ಸಿ.ಟಿ. ಜಯಕುಮಾರ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಎಸ್.ಎನ್. ಜಯರಾಮ್, ಎಎಸ್‌ಐ ಸುಬ್ರಮಣಿ, ದೇವರಾಜು ಹಾಗೂ ಸಿಬ್ಬಂದಿಗಳಾದ ಹೆಚ್.ಕೆ.ಕೃಷ್ಣ, ಪಿ.ಎ.ಮಹಮದ್ ಅಲಿ, ಎಂ.ಡಿ.ಮನು, ಅಬ್ದುಲ್ ಮಜೀದ್, ಹರೀಶ, ಹೇಮಲತಾ ರೈ ಮತ್ತು ಚಾಲಕರಾದ ಬಷೀರ್ ಇದ್ದರು.
- ಹೆಚ್.ಕೆ. ಜಗದೀಶ್