ಮಡಿಕೇರಿ, ಫೆ. ೮ : ಕುಶಾಲನಗರ ಸಮೀಪದ ಬಸವನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಹಿಂದಿನ ಅಧ್ಯಕ್ಷ ಎಸ್.ಎನ್. ರಾಜಾರಾವ್ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರದ ಗ್ರಾಮಾಂತರ ಠಾಣೆಯಲ್ಲಿ ಸಂಘದ ಹಿಂದಿನ ಅಧ್ಯಕ್ಷ ಎಸ್.ಎನ್. ರಾಜಾರಾವ್ ವಿರುದ್ಧ ದೂರು ನೀಡಲಾಗಿದೆ.

ಬಸವನಹಳ್ಳಿ ಲ್ಯಾಂಪ್ಸ್ ಹಾಲಿ ಅಧ್ಯಕ್ಷ ಆರ್.ಕೆ. ಚಂದ್ರು ಅವರು ನೀಡಿರುವ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ ೪೦೬, ೪೦೯ ಹಾಗೂ ೪೨೦ ನಿಯಮದಡಿ ಮೊಕದ್ದಮೆ ದಾಖಲಾಗಿದೆ.

ಸೋಮವಾರಪೇಟೆ ತಾಲೂಕಿನ ಗಿರಿಜನರಿಗೆ ಸೇರಿದ ಬಸವನಹಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ರಾಜಾರಾವ್ ಅವರು ಅನಗತ್ಯ ಕಾರಣಗಳ ನೆಪವೊಡ್ಡಿ ಸಂಘದಲ್ಲಿ ರೂ. ೨೩.೮೬ ಲಕ್ಷದ ಅವ್ಯವಹಾರ ನಡೆಸಿರುವುದು ಸಂಘದ ಲೆಕ್ಕಪರಿಶೋಧನೆಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಸ್ವತಃ ರಾಜಾರಾವ್ ಅವರೇ ತಪ್ಪೊಪ್ಪಿಗೆ ನೀಡಿ ಹಣವನ್ನು ಹಿಂದಿರುಗಿಸಲು ನೀಡಿದ ಅವಧಿ ಮುಗಿದ ಹಿನ್ನೆಲೆಯಲ್ಲಿ ಈಚೆಗೆ ನಡೆದ ಸಂಘದ ಮಹಾಸಭೆಯ ನಿರ್ಣಯದಂತೆ ರಾಜಾರಾವ್ ಅವರ ವಿರುದ್ದ ದೂರು ನೀಡಿದ್ದಾಗಿ ಸಂಘದ ಆಡಳಿತ ಮಂಡಳಿ ಹಾಲಿ ಅಧ್ಯಕ್ಷ ಆರ್.ಕೆ. ಚಂದ್ರು ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.