ಮಡಿಕೇರಿ, ಫೆ. ೯: ಪ್ರವಾಸಿ ಕೇಂದ್ರವೂ ಆಗಿ ಗುರುತಿಸಿಕೊಂಡಿರುವ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಆಗಾಗ್ಗೆ ವಾಹನದಟ್ಟಣೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಅರಿವಿದೆ. ವಾಹನಗಳ ಸೂಕ್ತ ನಿಲುಗಡೆಗೆ ಇಲ್ಲಿ ಅವಕಾಶಗಳು ಕಡಿಮೆ ಇದ್ದು, ಸಂಚಾರ ವ್ಯವಸ್ಥೆಗೆ ಕಿರಿಕಿರಿಯಾಗುವುದು ಸಹಜ ವಾಗಿದೆ. ಇಂತಹ ಪರಿಸ್ಥಿತಿಯಿದ್ದರೂ ನಗರದ ಹಲವು ಮುಖ್ಯ ರಸ್ತೆಗಳ ಬದಿಯಲ್ಲಿ ಅನುಪಯುಕ್ತ ವಾಹನಗಳನ್ನು ತಿಂಗಳಾನುಗಟ್ಟಲೆ ಯಿಂದ ನಿಲ್ಲಿಸುತ್ತಿರುವುದು ಮತ್ತೊಂದು ಸಮಸ್ಯೆಯಾಗಿದೆ. ಇಂತಹ ವಾಹನಗಳನ್ನು ಅಲ್ಲಲ್ಲೇ ನಿಲ್ಲಿಸುತ್ತಿರುವುದರಿಂದ ಆಗಾಗ್ಗೆ ಟ್ರಾಫಿಕ್ ಜಾಂ ಆಗುತ್ತಿದ್ದು ಇಂತಹ ವಾಹನಗಳನ್ನು ರಸ್ತೆ ಬದಿಯಿಂದ ತೆರವುಗೊಳಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.
ಈ ಬಗ್ಗೆ ಪೊಲೀಸ್ ಇಲಾಖೆ ಗಮನ ಹರಿಸುವಂತೆ ಕೆಲವಾರು ನಾಗರಿಕರು ಒತ್ತಾಯಿಸಿದ್ದಾರೆ. ಸಂಚಾರಿ ಪೊಲೀಸರು ನಗರದ ಹಲವೆಡೆಗಳಲ್ಲಿ ರಸ್ತೆ ಬದಿಯಲ್ಲಿ ಈ ರೀತಿಯಾಗಿ ಧೂಳು ಹಿಡಿದು ನಿಂತಿರುವ ವಾಹನಗಳನ್ನು ತೆರವುಗೊಳಿಸಲು ಕ್ರಮ ಜರುಗಿಸಬೇಕು. ಇದರಿಂದ ನಗರದ ಶೋಭೆಗೂ ಧಕ್ಕೆಯಾಗುತ್ತಿದೆ ಎಂದು ಅವರುಗಳು ಒತ್ತಾಯಿಸಿದ್ದಾರೆ.
ಈ ಬಗ್ಗೆ ನಗರಸಭಾ ಸದಸ್ಯ ರಾಜೇಶ್ ಯಲ್ಲಪ್ಪ ಅವರು ಪೊಲೀಸರ ಗಮನ ಸೆಳೆದಿದ್ದಾರೆ. ನಗರದ ಕೈಗಾರಿಕಾ ಬಡಾವಣೆ ರಸ್ತೆ (ಪತ್ರಿಕಾ ಭವನದಿಂದ ಡಿಐಸಿ ಜಂಕ್ಷನ್) ಏಕಮುಖ ರಸ್ತೆಯಾಗಿದ್ದು, ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳೂ ಸಂಚರಿಸಬೇಕಿದೆ. ಈ ರಸ್ತೆಯಲ್ಲಿ ಕೆಲವಾರು ವರ್ಕ್ಶಾಪ್‌ಗಳು ಇದ್ದು, ದುರಸ್ತಿಗೆಂದು ಹಲವಾರು ವಾಹನಗಳು ಬರುತ್ತಿರುತ್ತವೆ. ಈ ರಸ್ತೆಯಲ್ಲೂ ಕೂಡ ತಿಂಗಳಾನುಗಟ್ಟಲೆಯಿAದ ಹಳೆಯ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗು ತ್ತಿರುವ ಬಗ್ಗೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.